ಬಳ್ಳಾರಿ: ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ಕಾರ್ಯಕರ್ತರು ಎರಡನೇ ದಿನವಾದ ಶನಿವಾರವೂ ಮುಂದುವರೆಸಿದರು.
ಮೊದಲ ದಿನ ಶುಕ್ರವಾರ ನಗರದ ಕನಕದುರ್ಗಮ್ಮ ದೇವಸ್ಥಾನದ ಆವರದಿಂದ ಬೃಹತ್ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ಆಗಮಿಸಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತವರ ಬಿಜೆಪಿ ಕಾರ್ಯಕರ್ತರು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಡಿಸಿ ಕಚೇರಿ ಎದುರುಗಡೆಯೇ ಧರಣಿ ಕುಳಿತು ಧರಣಿಯನ್ನು ಮುಂದುವರೆಸಿದರು.
ಬಳಿಕ ಸ್ಥಳದಲ್ಲೇ ಶುಕ್ರವಾರ ರಾತ್ರಿ 12 ಗಂಟೆವರೆಗೆ ಅಹೋರಾತ್ರಿ ಧರಣಿ ನಡೆಸಿದ ಪ್ರತಿಭಟನಾ ನಿರತ ಮಾಜಿ ಸಚಿವ ರಾಮುಲು ಮತ್ತವರ ಕಾರ್ಯಕರ್ತರು, ನಂತರ ಸ್ಥಗಿತಗೊಳಿಸಿ, ಮರುದಿನ ಶನಿವಾರ ಬೆಳಗ್ಗೆ 8 ಗಂಟೆಯಿಂದ ಪ್ರತಿಭಟನಾ ಧರಣಿ ಸ್ಥಳಕ್ಕೆ ಆಗಮಿಸಿ ಪುನಃ ಮುಂದುವರೆಸಿದರು. ಪ್ರಕರಣದಲ್ಲಿ ಪ್ರಮುಖ ಕಿಂಗ್ ಪಿನ್ ಯಾರು ಎಂಬುದು ಪತ್ತೆಯಾಗಬೇಕು. ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ಮಾತ್ರವಲ್ಲ. ಅವರ ಬಂಧನವಾಗಬೇಕು ಎಂದು ಪ್ರತಿಭಟನಾನಿರತ ರಾಮುಲು ಪಟ್ಟುಹಿಡಿದಿದ್ದು, ಶನಿವಾರ ಸಂಜೆವರೆಗೆ ಧರಣಿ ಮುಂದುವರೆಸಿ, ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ಪ್ರತಿಭಟನಾನಿರತ ರಾಮುಲು ತಿಳಿಸಿದ್ದಾರೆ. ಅಗತ್ಯಬಿದ್ದರೆ ಬಳ್ಳಾರಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೂ ಪಾದಯಾತ್ರೆ ಹಮ್ಮಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಧರಣಿಯಲ್ಲಿ ಹಿರಿಯ ಮುಖಂಡ ಮಹಿಪಾಲ್, ಉಜ್ವಲಾ ಶ್ರೀಧರ್, ಪಾಲಿಕೆ ಮಾಜಿ ಸದಸ್ಯ ಮಲ್ಲನಗೌಡ, ಅಡವಿಸ್ವಾಮಿ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.