ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಆರೋಪ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರೋಧಿಸಿದ್ದಾರೆ.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವವರೆಗೂ ಹಾಗೂ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿ, ಅವರಿಗೆ ತಕ್ಕ ಶಿಕ್ಷೆ ಆಗುವವರೆಗೂ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಎಸ್ಐಟಿ ರಚನೆ ವಿರೋಧಿಸಿ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪೋಸ್ಟ್ ಮಾಡಿರುವ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವದ ದಿಕ್ಕು ತಪ್ಪಿಸಿ, ಭ್ರಷ್ಟಾರನ್ನು ರಕ್ಷಿಸುವ ಉದ್ದೇಶದಿಂದ ಎಸ್ಐಟಿ ರಚನೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿತರನ್ನು ರಕ್ಷಿಸಲು ಹೊರಟಿದೆ. ಎಸ್.ಐ.ಟಿ ರಚನೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಇದನ್ನು ಭಾರತೀಯ ಜನತಾ ಪಾರ್ಟಿಯು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರನ್ ಅವರು ಬರೆದ ಡೆತ್ ನೋಟ್ನಲ್ಲಿ ಈಗಾಗಲೇ ಉಲ್ಲೇಖವಾಗಿರುವಂತೆ ಸ್ವತಃ ಸಚಿವ ಬಿ ನಾಗೇಂದ್ರ ಹೆಸರಿರುವುದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಈಗಾಗಲೇ ಸಂಪುಟದಿಂದ ಮುಖ್ಯಮಂತ್ರಿಗಳು ವಜಾಗೊಳಿಸಬೇಕಿತ್ತು. ಆದರೆ ಆರೋಪ ಹೊತ್ತವರನ್ನು ಅವ್ಯವಹಾರದ ಜಾಲದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿಜಯೇಂದ್ರ ದೂರಿದ್ದಾರೆ.
ಪರಿಶಿಷ್ಟ ಪಂಗಡದ ಹಿತಾಸಕ್ತಿಗೆ ದ್ರೋಹಬಗೆದು ಹಣ ದುರುಪಯೋಗ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಅಮೂಲ್ಯ ಜೀವವೊಂದು ಆತ್ಮಹತ್ಯೆಗೆ ಈಡಾಗಿರುವುದರ ಕುರಿತು ಈ ಸರ್ಕಾರ ಎಳ್ಳಷ್ಟೂ ತಲೆಕೆಡಿಸಿಕೊಳ್ಳದೇ, ಯೂನಿಯನ್ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸದ್ಯ ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿನ್ನೆಲೆ, ಗತ್ಯಂತರವಿಲ್ಲದೇ ಎಸ್ಐಟಿ ರಚಿಸಿ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಂತಾರಾಜ್ಯ ವ್ಯಾಪ್ತಿಯಲ್ಲಿ ದುರುಪಯೋಗವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸರ್ಕಾರದ ಬಹುದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಹೊರತುಪಡಿಸಿ ಇನ್ಯಾವ ಬಗೆಯ ತನಿಖೆಯನ್ನು ರಾಜ್ಯ ಬಿಜೆಪಿ ಒಪ್ಪುವುದಿಲ್ಲ. ಸಿಬಿಐ ತನಿಖೆಯ ಬೇಡಿಕೆಗೆ ಸರ್ಕಾರ ಒಪ್ಪುವವರೆಗೂ, ಆರೋಪಿತ ಸಚಿವ ಬಿ.ನಾಗೇಂದ್ರ ಸ್ಥಾನ ತೆರವಾಗಿ ಅವರಿಗೆ ತಕ್ಕ ಶಿಕ್ಷೆಯಾಗುವವರೆಗೂ ತಾರ್ಕಿಕ ಅಂತ್ಯಕ್ಕೆ ನಾವು ಹೋರಾಟವನ್ನು ಕೊಂಡೊಯ್ಯಲಿದ್ದೇವೆ ಎಂದು ಸರ್ಕಾರಕ್ಕೆ ಬಿ ವೈ ವಿಜಯೇಂದ್ರ ಎಚ್ಚರಿಕೆ ರವಾನಿಸಿದ್ದಾರೆ.