ಬೆಂಗಳೂರು: ಈಗ ಇಡಿ ದಾಳಿಯ ಅವಶ್ಯಕತೆ ಇರಲಿಲ್ಲ. ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ. ನೋಟಿಸ್ ಕೊಟ್ಟು ತನಿಖೆ ನಡೆಸುತ್ತಿದ್ದಾರೆ. ಸಿಬಿಐನವರಿಗೆ ತನಿಖೆ ನಡೆಸಲು ಅವಕಾಶ ಇತ್ತು. ಆದರೂ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ ಎಂದು ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಸಂಬಂಧ ಇಡಿ ದಾಳಿಯ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಡೀ ಸರ್ಕಾರವೇ ಈ ಬಗ್ಗೆ ಗಮನಹರಿಸುತ್ತಿದೆ. ಕಾನೂನು ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ನಾವ್ಯಾರೂ ಇಡಿಗೆ ದೂರು ನೀಡಿರಲಿಲ್ಲ. ಎನ್.ಆರ್.ರಮೇಶ್ ಅವರ ದೂರಿನ ಆಧಾರದಲ್ಲಿ ಇಡಿ ದಾಳಿ ಮಾಡಲು ಆಗುವುದಿಲ್ಲ. ಅದಕ್ಕೆ ಅನೇಕ ಕ್ರಮಗಳಿವೆ. ನಾವು ಪಾರದರ್ಶಕವಾಗಿಯೇ ತನಿಖೆಗಾಗಿ ಸಚಿವರ ರಾಜೀನಾಮೆ ಪಡೆದುಕೊಂಡಿದ್ದೇವೆ ಎಂದರು.
ಇಡಿ ರಾಜಕೀಯ ಪ್ರೇರಿತವೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರ ದಾಳಿ ಮುಗಿಯಲಿ, ಆಮೇಲೆ ಮಾತನಾಡೋಣ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಕುರಿತು ಪ್ರತಿಕ್ರಿಯಿಸಿ, ಎಲ್ಲಿ ರಿಪೇರಿ ಮಾಡಬೇಕಿದೆ ಅನ್ನೋದನ್ನು ತಿಳಿದುಕೊಳ್ಳಬೇಕಿದೆ. ಹೀಗಾಗಿ ಎಲ್ಲಾ ರಾಜ್ಯಕ್ಕೂ ಎಐಸಿಸಿ ಸತ್ಯಶೋಧನಾ ಸಮಿತಿ ಕಳುಹಿಸಿದೆ. ನಾವೂ ಕೂಡ ಪ್ರತ್ಯೇಕವಾಗಿ ವಿಚಾರ ವಿನಿಮಯ ಮಾಡುತ್ತೇವೆ. ನಾವು ಒಳ್ಳೆಯ ಅಭ್ಯರ್ಥಿಗಳನ್ನು ಹಾಕಿದ್ದೆವು. ಬಿಜೆಪಿ, ಜೆಡಿಎಸ್ ಮೈತ್ರಿ ಅವರಿಗೆ ವರ್ಕೌಟ್ ಆಗಿದೆ. ಮೊದಲೇ ಇದರ ಬಗ್ಗೆ ನಮಗೆ ಅರಿವಿತ್ತು. ಹೀಗಾಗಿ ನಾವೂ ಕೂಡ ಪ್ರತ್ಯೇಕವಾಗಿ ವಿಭಾಗವಾರು ಸಮಿತಿ ಕಳಿಸಿ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದರು.
“ರಾಜ್ಯದಲ್ಲಿ 14-15 ಸ್ಥಾನಗಳನ್ನು ಲೋಕಸಬಾ ಚುನಾವಣೆಯಲ್ಲಿ ನಿರೀಕ್ಷೆ ಮಾಡಿದ್ದೆವು. ಆದರೆ 9 ಸ್ಥಾನಗಳು ಬಂದಿತ್ತು. ಒಂದು ಸ್ಥಾನದಿಂದ ಒಂಬತ್ತು ಸ್ಥಾನಕ್ಕೆ ಬಂದೆವು. ಎಲ್ಲಿ ಯಡವಟ್ಟಾಗಿದೆ? ಎಂಬುದನ್ನು ತಿಳಿಸುತ್ತೇವೆ. ನಾನು ಹಾಗೂ ಮುಖ್ಯಮಂತ್ರಿಗಳೂ ಮಾತನಾಡಿಕೊಂಡಿದ್ದೇವೆ. ನಾಯಕರನ್ನು ಕರೆದು ವಿಚಾರ ವಿನಿಮಯ ಮಾಡುತ್ತೇವೆ” ಎಂದರು.