ಮನೆ ಅಪರಾಧ ವಾಲ್ಮೀಕಿ ನಿಗಮದ ಹಗರಣ; ಸಿಬಿಐನಿಂದ ಎಫ್ಐಆರ್‌

ವಾಲ್ಮೀಕಿ ನಿಗಮದ ಹಗರಣ; ಸಿಬಿಐನಿಂದ ಎಫ್ಐಆರ್‌

0

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣ ಮತ್ತೂಂದು ತಿರುವು ಪಡೆದುಕೊಂಡಿದ್ದು, ಯೂನಿಯನ್‌ ಬ್ಯಾಂಕ್‌ ನ ಹಿರಿಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸಿಬಿಐ ಅಧಿಕಾರಿಗಳು ಬ್ಯಾಂಕ್‌ನ ಮೂವರು ಅಧಿಕಾರಿಗಳು ಸೇರಿ ಐವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

Join Our Whatsapp Group

ಈ ಮೂಲಕ ಪ್ರಕರಣದ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ, ನಿಗಮದ ಅಧಿಕಾರಿಗಳು ಹಾಗೂ ಇತರೆ ಜನಪ್ರತಿನಿಧಿಗಳಿಗೆ ಸಿಬಿಐ ತನಿಖೆ ಬಿಸಿ ತಟ್ಟಲಿದೆ. ಯೂನಿಯನ್‌ ಬ್ಯಾಂಕ್‌ನ ಬೆಂಗಳೂರು ಪೂರ್ವ ವಲಯ ಡಿಜಿಎಂ ಜೆ.ಮಹೇಶ್‌ ಎಂಬುವರು ನೀಡಿದ ದೂರಿನ ಮೇರೆಗೆ ಎಂ.ಜಿ.ರಸ್ತೆಯಲ್ಲಿರುವ ಬ್ಯಾಂಕ್‌ ಶಾಖೆಯ ಮುಖ್ಯಸ್ಥೆ ಶುಚಿಸ್ಮಿತಾ ರೌಲ್‌, ಶಾಖೆಯ ಉಪ ಮುಖ್ಯಸ್ಥೆ ಡಿ.ದೀಪಾ, ಅದೇ ಶಾಖೆಯ ಕ್ರೆಡಿಟ್‌ ಅಧಿಕಾರಿ ವಿ.ಕೃಷ್ಣಮೂರ್ತಿ( ಈ ಮೂವರು ಅಧಿಕಾರಿಗಳನ್ನು ಸದ್ಯ ಅಮಾನತುಗೊಳಿಸಲಾಗಿದೆ) ಜತೆಗೆ ಅಪರಿಚಿತ ಖಾಸಗಿ ವ್ಯಕ್ತಿಗಳು ಹಾಗೂ ಅಪರಿಚಿತ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ ಐಆರ್‌ ದಾಖಲಿಸಲಾಗಿದೆ.

ಆರೋಪಿತ ಬ್ಯಾಂಕ್‌ ಅಧಿಕಾರಿಗಳು ಕೆಲ ಖಾಸಗಿ ವ್ಯಕ್ತಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸೇರಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬ್ಯಾಂಕ್‌ನ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿತರ ವಿರುದ್ಧ ಆರೋಪಿಗಳ ವಿರುದ್ಧ ಬ್ಯಾಂಕ್‌ ವಂಚನೆ, ವಿಶ್ವಾಸದ್ರೋಹ, ವಂಚನೆ ಮತ್ತು ವಂಚಿಸಲೆಂದೆ ಉದ್ದೇಶಪೂರ್ವಕವಾಗಿ ದಾಖಲೆ, ಸಹಿ ನಕಲು ಮಾಡಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಬ್ಯಾಂಕ್‌ ಡಿಜಿಎಂ ಮಹೇಶ್‌ ದೂರಿನಲ್ಲಿ ಕೋರಿದ್ದು, ಈ ಸಂಬಂಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದರು.

ಎಸ್‌ಐಟಿ ಪ್ರಕರಣವೂ ಸಿಬಿಐಗೆ ಹಸ್ತಾಂತರ: ನಿಗಮದಲ್ಲಿ ನಡೆದಿದ್ದ ವಂಚನೆ ಸಂಬಂಧ ಈಗಾಗಲೇ ನಿಗಮದ ವ್ಯವಸ್ಥಾಪಕ ಎ. ರಾಜಶೇಖರ್‌ ಹೈಗ್ರೌಂಡ್ಸ್‌ ಠಾಣೆಯಲ್ಲಿ ಬ್ಯಾಂಕ್‌ನ ಆರು ಮಂದಿ ಅಧಿಕಾರಿಗಳ ವಿರುದ್ಧ 94.73 ಕೋಟಿ ರೂ. ವರ್ಗಾವಣೆ ಆರೋಪದ ಪ್ರಕರಣ ದಾಖಲಿಸಿದ್ದರು. ಜತೆಗೆ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ 2 ಪ್ರಕರಣಗಳನ್ನು ಸಿಐಡಿಯ ಎಸ್‌ಐಟಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ಇಬ್ಬರು ಮಾಜಿ ಅಧಿಕಾರಿಗಳಾದ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಮಾಜಿ ಲೆಕ್ಕಾಧಿಕಾರಿ ಪರಶುರಾಮ್‌ ಜಿ.ದುರ್ಗಣ್ಣನವರ್‌ ಬಂಧಿಸಿದ್ದು, ಸಚಿವ ನಾಗೇಂದ್ರ ಆಪ್ತ ನಾಗೇಶ್‌ ಎಂಬವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತ್ತು. ಇದೀಗ ಸಿಬಿಐನಲ್ಲಿ ಇದೇ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಎಫ್ಐಆರ್‌ ದಾಖಲಾಗಿರುವುದರಿಂದ ಎಸ್‌ಐಟಿ ಪ್ರಕರಣವನ್ನು ನಿಯಮದ ಪ್ರಕಾರ ಸಿಬಿಐಗೆ ವರ್ಗಾವಣೆ ಮಾಡಲೇಬೇಕಾಗುತ್ತದೆ.

ಒಂದು ವೇಳೆ ಪ್ರಕರಣ ಹಸ್ತಾಂತರಕ್ಕೆ ಹಿಂದೇಟು ಹಾಕಿದರೆ, ಸಿಬಿಐ ಅಧಿಕಾರಿಗಳು ಕೋರ್ಟ್‌ ಮೂಲಕವೇ ಪ್ರಕರಣದ ದಾಖಲೆಗಳನ್ನು ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಎಸ್‌ಐಟಿಗೂ ನೋಟಿಸ್‌ ಜಾರಿ ಗೊಳಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ನಾಗೇಂದ್ರ ವಿಚಾರಣೆ ಸಾಧ್ಯತೆ: ಮತ್ತೂಂದೆಡೆ ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ನೇರವಾಗಿ ಸಚಿವ ನಾಗೇಂದ್ರ ಹೆಸರು ಇಲ್ಲ. ಆದರೆ, ಅಪರಿಚಿತ ಸರ್ಕಾರಿ ಅಧಿಕಾರಿಗಳು/ಜನಪ್ರತಿನಿಧಿಗಳು ಎಂದು ಉಲ್ಲೇಖೀಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಚಿವ ನಾಗೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.