ಮನೆ ರಾಜ್ಯ ಸಕ್ಕರೆ ನಗರಿಯಲ್ಲಿ ವಾಲ್ಮೀಕಿ ಜಯಂತಿ ಸಂಭ್ರಮ

ಸಕ್ಕರೆ ನಗರಿಯಲ್ಲಿ ವಾಲ್ಮೀಕಿ ಜಯಂತಿ ಸಂಭ್ರಮ

0

ಮಂಡ್ಯ: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಶ್ರೀರಾಮಾಯಣವು ಸಾರ್ವಕಾಲಿಕವಾದುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

Join Our Whatsapp Group

ಅವರು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ,ನಗರಸಭೆ ಹಾಗೂ ಕನ್ನಡ ಮತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ವಾಲ್ಮೀಕಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ರಾಮಾಯಣವನ್ನು ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿವೆ.ಈ ಮಹಾಕಾವ್ಯ ಜಗತ್ತಿನಲ್ಲಿ ಇಂದಿಗೂ ಮಾನವೀಯತೆ,ಧರ್ಮ ಸಂಸ್ಕಾರ ನೆಲೆಸಲು ಕಾರಣವಾಗಿದೆ. ಇಂದು ಬಹುತೇಕರಿಗೆ ಕಿರಿಯರು,ಹಿರಿಯರು ಗುರುಗಳು ಎನ್ನುವ ಭಾವನೆ ಕಡಿಮೆ ಆಗುತ್ತಿದೆ.ಮಾನವೀಯ ಮೌಲ್ಯಗಳು ಕುಸಿಯುತ್ತಿವೆ.ನಾನು ನನ್ನದು ಎನ್ನುವ ಸಂಕುಚಿತ ಭಾವ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕರು ಉತ್ತಮ ಚಿಂತನೆಗಳೊಂದಿಗೆ ಸಮಾಜ ರೂಪಿಸಲು ಸಾಧಕರ ಜಯಂತಿಗಳ ಆಚರಣೆ ಸಹಕರಿಸುತ್ತದೆ ಎಂದು ತಿಳಿಸಿದರು.
ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಅಳವಡಿಕೊಂಡಿದ್ದ ತಪ್ಪು ಮಾರ್ಗವನ್ನು ತೊರೆದು ಮನಪರಿವರ್ತನೆ ಮಾಡಿಕೊಂಡು ಮಹಾನ್ ಖುಷಿ ಆಗಿ ರಾಮಾಯಣವನ್ನು ರಚಿಸಿದರು.
ಇವರ ಜೀವನ ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸಗಳ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದರು.
ಕೆಲವು ಸನ್ನಿವೇಶ,ಒತ್ತಡದಿಂದ ಕೆಟ್ಟ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಬದಲಾವಣೆಗೆ ಪ್ರತಿಯೊಬ್ಬರಿಗೂ ಅವಕಾಶವಿದೆ. ಮಹಾನ್ ವ್ಯಕ್ತಿಗಳ ತತ್ವ,ಆದರ್ಶ ಹಾಗೂ ಅವರು ನಡೆದ ಬಂದ ದಾರಿಗಳು ಸದಾ ಜೀವನಕ್ಕೆ ದಾರಿ ದೀಪ ಎಂದರು.
ಶಾಸಕ ಪಿ.ರವಿಕುಮಾರ್ ರವರು ಮಾತನಾಡಿ ಮಹರ್ಷಿ ವಾಲ್ಮೀಕಿ ಪ್ರಾಚೀನ ಕಾಲದ ಅತ್ಯುತ್ತಮ ಬರಹಗಾರ ಮತ್ತು ಗೌರವಾನ್ವಿತ ಋಷಿ.ಅವರು ಹಿಂದೂ ಧರ್ಮದ ರಾಮಾಯಣ ಮಹಾಕಾವ್ಯವನ್ನು ರಚಿಸಿದರು.ರಾಮಾಯಣವು ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಮೊದಲ ಸಂಸ್ಕೃತ ಪುಸ್ತಕವಾಗಿದೆ ಎಂದರು.
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಟಿ.ಕೃಷ್ಣಯ್ಯ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ವಿಶ್ವವಿಖ್ಯಾತವಾಗಿ ಅವರನ್ನು ಋಷಿ ಕವಿ,ಕವಿ ಕೋಗಿಲೆ,ಆದಿ ಕವಿ ಹಾಗೂ ಮುಂತಾದ ಹೆಸರಿನಲ್ಲಿ ಕರೆಯಲಾಗುತ್ತದೆ ಎಂದರು.
ಮಹರ್ಷಿ ವಾಲ್ಮೀಕಿ ಅವರನ್ನು ಮೊದಲು ರತ್ನಾಕರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು, ಅವರು ಪ್ರಾಣಿಗಳ ಬೇಟೆ ಹಾಗೂ ಕಳ್ಳತನ ಮೂಲಕ ಕುಟುಂಬವನ್ನು ಸಾಕುತ್ತಿದ್ದರು.ಕುಟುಂಬ ವರ್ಗದವರಿಗೆ ಅವರ ವೃತ್ತಿಯ ಬಗ್ಗೆ ತಿಳಿಸಿದಾಗ ಕುಟುಂಬ ವರ್ಗದವರು,
ಇದು ತಪ್ಪು ಇದರಲ್ಲಿ ನಮಗೆ ಪಾಲು ಬೇಡ ಎಂದಾಗ ನಾರದ ಮುನಿಗಳ ಮಾರ್ಗದರ್ಶನದಲ್ಲಿ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಾರೆ.ಧ್ಯಾನದಲ್ಲಿ ತೊಡಗಿ ರಾಮಾಯಣವನ್ನು ರಚಿಸಿದರು. ಪರಿವರ್ತನೆಯಿಂದ ಜನರು ಎಂತಹ ದೊಡ್ಡ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದರು ಎಂದರು.
ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ 12 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜ ಸೇವೆ ಸಾಧಕರಾದ ಆರ್. ಜಗದೀಶ್,ಅರ್ಕೇಶ, ಸೋಮಶೇಖರ್ ಬಿ.ಜೆ.ರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು,ಉಪವಿಭಾಗಾಧಿಕಾರಿ ಶಿವಮೂರ್ತಿ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಎಂ ಬಾಬು,ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರನಾಯಕ, ಉಪಾಧ್ಯಕ್ಷ ಪುಟ್ಟಸ್ವಾಮಿನಾಯಕ, ಸಂಘ ಸಂಸ್ಥೆಗಳ ಮುಖಂಡರುಗಳಾದ ವೆಂಕಟೇಶ್,ಕುಮಾರ್ ಸೇರಿದಂತೆ ಅನೇಕ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಸಕ್ಕರೆ ನಗರಿಯಲ್ಲಿ ಆಚರಿಸಲಾಯಿತು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಹೊರಟ ಶ್ರೀ ವಾಲ್ಮೀಕಿ ಜಯಂತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು.
ಪುಷ್ಪಗಳಿಂದ ಅಲಂಕೃತ ರಥದಲ್ಲಿ ಶ್ರೀ ವಾಲ್ಮೀಕಿಯ ಭಾವಚಿತ್ರ ಹೊತ್ತು ಸಾಗಿದ ಮೆರವಣಿಗೆಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾ ಪಂಚಾಯತಿ ಕಚೇರಿವರೆಗೆ ತೆರಳಿತು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.