ಮೈಸೂರು : ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲುಗಳ ನಿರ್ವಹಣೆಗಾಗಿ ಮೈಸೂರಿನಲ್ಲಿ ಅತ್ಯಾಧುನಿಕ ಡಿಪೋ ಸ್ಥಾಪಿಸಲಾಗುವುದು ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ಮುದಿತ್ ಮಿತ್ತಲ್ ತಿಳಿಸಿದರು. ”ಹೊಸ ಗೂಡ್ಸ್ ಟರ್ಮಿನಲ್ನಲ್ಲಿ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಡಿಪೋ ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.
ವಂದೇ ಭಾರತ್ ರೈಲುಗಳ ತಾಂತ್ರಿಕ ನಿರ್ವಹಣೆಗೆ ಡಿಪೋ ಅಗತ್ಯವಿದ್ದು, ಮೈಸೂರಿನಲ್ಲೇ ಈ ಮೂಲಸೌಕರ್ಯ ಲಭ್ಯವಾಗುವುದರಿಂದ ರೈಲುಗಳ ನಿಲುಗಡೆ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ,” ಎಂದು ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು. ”ಮೈಸೂರು ಯಾರ್ಡ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಎರಡು ವರ್ಷದಲ್ಲಿ ಪೂರ್ಣ ಗೊಳಿಸುವ ಗುರಿ ಹೊಂದಲಾಗಿದೆ. ಇದು ಸಿದ್ಧ ಗೊಂಡಲ್ಲಿಹೆಚ್ಚಿನ ರೈಲುಗಳ ಕಾರ್ಯಾಚರಣೆಯನ್ನು ಇಲ್ಲಿಂದ ನಡೆಸಬಹುದಾಗಿದೆ,” ಎಂದು ತಿಳಿಸಿದರು.
”ನೈರುತ್ಯ ರೈಲ್ವೆ ಮೈಸೂರು ವಿಭಾಗವು 2025-26ನೇ ಹಣಕಾಸು ವರ್ಷದಲ್ಲಿಉತ್ತಮ ಸಾಧನೆ ಮಾಡಿದೆ. 449.13 ಕೋಟಿ ಪ್ರಯಾಣಿಕ ಆದಾಯ ಗಳಿಸಿ ಶೇ.1.49ರಷ್ಟು ಬೆಳವಣಿಗೆ ಕಂಡಿದೆ. ಕಳೆದ ಸಾಲಿನಲ್ಲಿ419.89 ಕೋಟಿ ರೂ. ವರಮಾನ ಬಂದಿತ್ತು. ಟಿಕೆಟ್ ಪರಿಶೀಲನೆಯಿಂದ 9.75 ಕೋಟಿ ರೂ. ಆದಾಯ ದೊರೆತಿದೆ,” ಎಂದು ಹೇಳಿದರು.
”ವಾಣಿಜ್ಯ ಜಾಹೀರಾತು ಮೂಲದಿಂದ ದಾಖಲೆಯ 3.17 ಕೋಟಿ ರೂ., ಪಾರ್ಕಿಂಗ್ನಿಂದ 4.02 ಕೋಟಿ ರೂ., ಕೇಟರಿಂಗ್ನಿಂದ 2.61 ಕೋಟಿ ರೂ. ಆದಾಯ ಬಂದಿದೆ. ಪಾರ್ಸೆಲ್ ಆದಾಯ 11.81 ಕೋಟಿ ರೂ.ಗೆ ತಲುಪಿದ್ದು, ಎಸ್ಎಲ್ಆರ್ ಹಾಗೂ ವಿಪಿಎಚ್ ಮೂಲಕ ಪಾರ್ಸೆಲ್ ವರಮಾನ 5.85 ಕೋಟಿ ರೂ. ಸಂಗ್ರಹವಾಗಿದೆ,” ಎಂದು ವಿವರಿಸಿದರು. ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಇದ್ದರು.
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ2025-26ನೇ ಸಾಲಿನಲ್ಲಿ 106 ರೈಲುಗಳ ವೇಗ ಹೆಚ್ಚಿಸಿ ಪ್ರಯಾಣದ ಅವಧಿ ಕಡಿತಗೊಳಿಸಲಾಗಿದೆ. 14 ರೈಲುಗಳನ್ನು ಡೀಸೆಲ್ನಿಂದ ವಿದ್ಯುತ್ ಚಾಲಿತವಾಗಿ ಬದಲಿಸಿದ ಪರಿಣಾಮ ವಾರ್ಷಿಕ 43.73 ಕೋಟಿ ರೂ. ಇಂಧನ ವೆಚ್ಚ ಉಳಿತಾಯವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ಸಿಂಗ್ ತಿಳಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ ಅವರು, ‘‘ರೈಲುಗಳ ವೇಗ ಹೆಚ್ಚಿಸಿರುವುದು ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ಇದರಿಂದ ಶೀಘ್ರವಾಗಿ ಪ್ರಯಾಣಿಕರು ತಮ್ಮ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿದೆ,’’ ಎಂದರು.
‘ಬೆಳ್ಳಂದೂರು ರಸ್ತೆ- ಕಾರ್ಮೆಲಾರಂ ನಡುವೆ 3.522 ಕಿಮೀ ಹಾಗೂ ಮಕ್ಕಜಿಪಲ್ಲಿ -ನಾಗಸಮುದ್ರಂ – ಧರ್ಮಾವರಂ ನಡುವೆ 29 ಕಿ.ಮೀ ರೈಲು ಮಾರ್ಗದ ದ್ವಿಪಥ ಮತ್ತು ವಿದ್ಯುದೀಕರಣ ಕಾರ್ಯ ಪೂರ್ಣಗೊಳಿಸಿ ಚಾಲನೆ ನೀಡಲಾಗಿದೆ. ತುಮಕೂರು, ಉರುಕೆರೆ-ತಿಮ್ಮರಾಜನಹಳ್ಳಿ ನಡುವೆ 24 ಕಿ.ಮೀ ಉದ್ದದ ಹೊಸ ರೈಲು ಮಾರ್ಗ ಪೂರ್ಣಗೊಂಡಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೈಯಪ್ಪನಹಳ್ಳಿ ಪಶ್ಚಿಮ ನಡುವೆ 4.92 ಕಿ.ಮೀ ಉದ್ದದ 3ನೇ ಮತ್ತು 4ನೇ ರೈಲು ಮಾರ್ಗಗಳನ್ನು ಕಾರ್ಯಾರಂಭ ಮಾಡಲಾಗಿದೆ,’’ ಎಂದು ತಿಳಿಸಿದರು.















