ಮೈಸೂರು/ನಂಜನಗೂಡು: ವರುಣ ವಿಧಾನಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಂಜನಗೂಡಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಸಿದ್ದರಾಮನಹುಂಡಿಯ ಮನೆ ದೇವರಿಗೆ ಪೂಜೆ ಸಲ್ಲಿಸಿ, ಕುಟುಂಬದ ಸದಸ್ಯರೊಂದಿಗೆ ಸಿದ್ದರಾಮೇಶ್ವರ ಹಾಗೂ ಶ್ರೀರಾಮ ಮಂದಿರದಲ್ಲಿ ದೇವರ ದರ್ಶನ ಪಡೆದರು. ನಂತರ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಹಾಗೂ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಿಗೆ ಪೂಜೆ ಸಲ್ಲಿಸಿದರು. ನಂಜನಗೂಡಿನ ಗೂಳೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿದರು. ವಿವಿಧ ತಾಲ್ಲೂಕುಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು, ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿ ಸಭೆಯಲ್ಲಿ ಜಮಾಯಿಸಿದ್ದರು.
ಮುಖಂಡರಾದ ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಸತೀಶ್ ಜಾರಕಿಹೊಳಿ, ಡಾ.ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಇದ್ದರು.