ಮೈಸೂರು (Mysuru): ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ವಸತಿ ರಹಿತ ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ರವೀಂದ್ರಶೆಟ್ಟಿ ತಿಳಿಸಿದರು.
ಇಂದು ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಶೇ.40 ರಷ್ಟು ಕುಟುಂಬಗಳಿಗೆ ಸ್ವತಃ ಮನೆ ಇಲ್ಲ. ಇವರಿಗೆ ಸೂರು ಕಲ್ಪಿಸಲು ವಸತಿ ಸಚಿವರಿಗೆ ಮನವಿ ಮಾಡಲಾಗಿದೆ. ವಸತಿ ರಹಿತರ ಸರ್ವೇ ಮಾಡಲಾಗುತ್ತಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅಲೆ ಮಾರಿ ಮತ್ತು ಅರೆ ಅಲೆಮಾರಿ ಜನಾಂಗದಲ್ಲಿ 44 ವಿವಿಧ ಜಾತಿಗಳು ಬರುತ್ತವೆ. ಮೈಸೂರಿನಲ್ಲಿ ಸೂಮಾರು 9645 ಅಲೆಮಾರಿ ಮತ್ತು ಅರೆ ಅಲೆಮಾರಿ ಜನಸಂಖ್ಯೆ ಇದೆ. ಜಿಲ್ಲೆಯಲ್ಲಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ 42 ಪಲಾನುಭವಿಗಳಿಗೆ ತಲಾ 50 ಸಾವಿರಗಳಂತೆ ಒಟ್ಟು 21 ಲಕ್ಷ ಸಾಲ ಮತ್ತು ಸಹಾಯಧನ ನೀಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 03 ಜನ ಪಲಾನುಭವಿಗಳಿಗೆ ತಲಾ 1.5 ಲಕ್ಷಗಳ ಸಹಾಯಧನ ನೀಡಲಾಗಿದೆ. ಕಿರು ಸಾಲ ಯೋಜನೆಯಡಿ 22 ಪಲಾನುಭವಿಗಳಿಗೆ 4.40 ಲಕ್ಷಗಳ ಸಾಲ ಮತ್ತು ಸಹಾಯಧನ ಬಿಡುಗಡೆ ಮಾಡಲಾಗಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಒಬ್ಬ ವಿಧ್ಯಾರ್ಥಿಯ 04 ವರ್ಷದ ಇಂಜಿನಿಯರಿಗ್ ವ್ಯಾಸಂಗಕ್ಕೆ 3.70 ಲಕ್ಷಗಳನ್ನು ಮಂಜೂರು ಮಾಡಲಾಗಿದ್ದು, 02 ಕಂತುಗಳಲ್ಲಿ 1.90 ಲಕ್ಷ ರೂ ಗಳ ಸಾಲ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಸದಸ್ಯರಾದ ಟಿ.ಮಂಜುನಾಥ್, ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ಕಾರ್ಯದರ್ಶಿಗಳಾದ ಶಿವಾನಂದ ಭಟ್, ದೇವರಾಜ ಅರಸ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕಾರ ಹೆಚ್.ಎಂ.ಶೋಭಾ ಇದ್ದರು.