ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಹಲವು ಕಡೆ ತಡೆಗೋಡೆಯಿಲ್ಲದೆ ನಾಲೆಗಳಿಗೆ ವಾಹನಗಳು ಬಿದ್ದು ಅಪಘಾತವಾಗುತ್ತಿರುವ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ನಾಲೆಗಳು ಹಾಗೂ ಕೆರೆಗಳ ಬದಿಗಳಲ್ಲಿ ತಡೆಗೋಡೆ ನಿರ್ಮಿಸುವ ಹಾಗೂ ನಿರ್ವಹಣೆ ಮಾಡಲು ಸಮಿತಿಯನ್ನು ಮಂಡ್ಯ ಜಿಲ್ಲಾಡಳಿತ ನೇಮಿಸಿದೆ.
ಜಿಲ್ಲೆಯ 7 ತಾಲೂಕುಗಳಲ್ಲಿ ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ, ಕಾವೇರಿ ನೀರಾವರಿ ನಿಗಮ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ.
ಏಳು ದಿನಗಳ ಒಳಗೆ ಬ್ಲಾಕ್ ಸ್ಪಾಟ್ ಅನ್ನು ಗುರುತಿಸಿ ವರದಿ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಸೂಚನೆ ನೀಡಿದ್ದಾರೆ.
ಜುಲೈ 27 ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ವಿಸಿ ನಾಲೆಗೆ ಕಾರು ಬಿದ್ದು ಲೋಕೇಶ್ ಎಂಬಾತ ಸಾವನ್ನಪ್ಪಿದ್ದನು. ಜುಲೈ 29 ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿ ವಿಸಿ ಉಪ ನಾಲೆಗೆ ಕಾರು ಉರುಳಿ ನಾಲ್ವರು ಸಾವನ್ನಪ್ಪಿದರು.