ಮನೆ ಸುದ್ದಿ ಜಾಲ ಆಷಾಢ ಶುಕ್ರವಾರ, ವರ್ಧಂತಿಗೆ ಬೆಟ್ಟಕ್ಕೆ ವಾಹನ ಸಂಚಾರ ನಿಷೇಧ: ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ

ಆಷಾಢ ಶುಕ್ರವಾರ, ವರ್ಧಂತಿಗೆ ಬೆಟ್ಟಕ್ಕೆ ವಾಹನ ಸಂಚಾರ ನಿಷೇಧ: ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ

0

ಮೈಸೂರು (Mysuru): ನಾಡಅಧಿದೇವತೆ ಚಾಮುಂಡೇಶ್ವರಿ ವರ್ಧಂತಿ ಹಾಗೂ ಆಷಾಢ ಶುಕ್ರವಾರದ ದಿನಗಳಂದು ಬೆಟ್ಟದಲ್ಲಿ ವಾಹನ ನಿಲುಗಡೆ ಹಾಗೂ ಸಂಚಾರಕ್ಕೆ ನಿರ್ಬಂಧ ವಿಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ನಗರದ ಚಾಮುಂಡಿಬೆಟ್ಟದಲ್ಲಿ ಆಷಾಡ ಶುಕ್ರವಾರದ ದಿನಗಳಂದು ಹಾಗೂ ಚಾಮುಂಡೇಶ್ವರಿ ವರ್ಧಂತಿ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ತಮ್ಮ ತಮ್ಮ ವಾಹನಗಳಲ್ಲಿ ಬರುವುದರಿಂದ ಚಾಮುಂಡಿಬೆಟ್ಟದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತದೆ. ಇದನ್ನ ತಪ್ಪಿಸುವ ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಚಾಮುಂಡಿಬೆಟ್ಟಕ್ಕೆ ಬರುವ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸುವುದು ಅತ್ಯಾವಶ್ಯಕವಾಗಿರುವುದರಿಂದ ದಿನಾಂಕ ಜುಲೈ 1, ಜು.8, ಜು.15, ಮತ್ತು ಜು.22ರ ಆಷಾಢ ಶುಕ್ರವಾರಗಳಂದು ಹಾಗೂ ಶ್ರೀ ಚಾಮುಂಡೇಶ್ವರಿ ವರ್ಧಂತಿ ಜು.20 ರಂದು ಚಾಮುಂಡಿಬೆಟ್ಟಕ್ಕೆ ತೆರಳುವ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.

ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾಧಿಗಳು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ಗೊತ್ತುಮಾಡಿರುವ ಸ್ಥಳದಲ್ಲಿ ನಿಲುಗಡೆ ಮಾಡಿ ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುವ ಉಚಿತ ಕೆ.ಎಸ್.ಆರ್.ಟಿ ಬಸ್‌ಗಳಲ್ಲಿ ದೇವಸ್ಥಾನಕ್ಕೆ ತೆರಳ ಬೇಕಾಗಿರುತ್ತದೆ. ಉಚಿತ ಬಸ್ ಸೌಲಭ್ಯ ಬೆಳಗಿನ ಜಾವ 3.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ.

ಭಕ್ತಾದಿಗಳ ವಾಹನಗಳು ಚಾಮುಂಡಿಬೆಟ್ಟದ ತಾವರೆಕಟ್ಟೆಯಿಂದ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಐವಾಕ್ ರಸ್ತೆ ಮೂಲಕ ಚಾಮುಂಡಿಬೆಟ್ಟಕ್ಕೆ ಹೋಗುವ (ಸಾರಿಗೆ ಸಂಸ್ಥೆಯ ವಾಹನಗಳನ್ನು ಹೊರತುಪಡಿಸಿ) ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತಾದಿಗಳು ನಂಜನಗೂಡು ರಸ್ತೆ ಮೂಲಕ ಎಂ.ಎಲ್.ಸೋಮಸುಂದರಂ ವೃತ್ತ-ಮಹಾರಾಣಾ ಪ್ರತಾಪ ಸಿಂಹ ವೃತ್ತ-ಸಂಗೊಳ್ಳಿ ರಾಯಣ್ಣ ವೃತ್ತ ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಮೈದಾನದ ಖಾಲಿ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.

ಭಕ್ತಾದಿಗಳನ್ನು ಕರೆದುಕೊಂಡು ಹೋಗುವ ನಗರ ಸಾರಿಗೆ ಕೆಎಸ್ಆರ್ ಟಿಸಿ ಬಸ್ಸುಗಳು ಚಾಮುಂಡಿಬೆಟ್ಟದ ಮೇಲೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಬೇಕು. ಚಾಮುಂಡಿಬೆಟ್ಟದ ಮೇಲಿನಿಂದ ಭಕ್ತಾದಿಗಳನ್ನು ವಾಪಸ್ ಕರೆದುಕೊಂಡು ಬರುವಾಗ ನಗರ ಸಾರಿಗೆ ಬಸ್ಸುಗಳು ಚಾಮುಂಡಿಬೆಟ್ಟದ ಮೇಲಿನ ನಗರ ಸಾರಿಗೆ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸಂಗೊಳ್ಳಿರಾಯಣ್ಣ ವೃತ್ತದ ಬಳಿ ಬಲ ತಿರುವು ಪಡೆದು ಲಲಿತಮಹಲ್ ಮುಖ್ಯ ರಸ್ತೆ ಮೂಲಕ ಲಲಿತಮಹಲ್ ಮೈದಾನ ಬಳಿ ಸಾರಿಗೆ ಬಸ್ಸುಗಳ ನಿಲುಗಡೆಗೆ ಮಾಡಿರುವ ಸ್ಥಳದಲ್ಲಿ ನಿಲುಗಡೆ ಮಾಡಬೇಕು.

ದೇವಸ್ಥಾನದಲ್ಲಿ ಉಚಿತ ಪ್ರಸಾದ ವಿನಿಯೋಗದ ವಾಹನಗಳಿಗೆ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಬಸ್ ನಿಲ್ದಾಣದ ಎದುರು ಇರುವ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಿದ್ದು, ಪ್ರಸಾದ ವಿನಿಯೋಗದ ವಾಹನಗಳಿಗೆ ಜಿಲ್ಲಾಡಳಿತದಿಂದ ನೀಡುವ ಪಾಸ್ ಕಡ್ಡಾಯವಾಗಿರುತ್ತದೆ. ನಿಗದಿಪಡಿಸಿದ ಸಮಯದಲ್ಲಿಯೇ ಪ್ರಸಾದ ವಿನಿಯೋಗ ಮಾಡಬೇಕಾಗಿರುತ್ತದೆ. ಮುಂಚಿತವಾಗಿ ಅಥವಾ ತಡವಾಗಿ ಬಂದ ಪ್ರಸಾದ ವಿನಿಯೋಗದ ವಾಹನಗಳಿಗೆ ಪ್ರವೇಶ ನೀಡಲಾಗುವುದಿಲ್ಲ.

ದೇವಸ್ಥಾನಕ್ಕೆ ಬರುವ ಶಿಷ್ಟಾಚಾರವಿರುವ ವಾಹನಗಳು, ಮಾಧ್ಯಮ ವಾಹನಗಳು ಮತ್ತು ಕರ್ತವ್ಯದ ಮೇರೆಗೆ ತೆರಳುವ ವಾಹನಗಳಿಗೆ ಬೆಟ್ಟದ ಮೇಲೆ ಹೋಗಲು ಅವಕಾಶವಿದ್ದು, ಸದರಿ ವಾಹನಗಳಿಗೆ ಚಾಮುಂಡಿ ಬೆಟ್ಟದಲ್ಲಿ ಈಗಾಗಲೇ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಬಹುಮಹಡಿ ಪಾರ್ಕಿಂಗ್ ಬಳಿಯಿಂದ ದೇವಸ್ಥಾನದವರೆಗೆ ಯಾವುದೇ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ.

ಪ್ರತಿ ಆಷಾಡ ಶುಕ್ರವಾರದ ಹಿಂದಿನ ದಿನ ಅಂದರೆ ಗುರುವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ ದಿನದ ಹಿಂದಿನ ದಿನದ ರಾತ್ರಿ 10 ಗಂಟೆಯಿಂದಲೇ ಯಾವುದೇ ರೀತಿಯ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿರುತ್ತದೆ.

ಚಾಮುಂಡಿ ಬೆಟ್ಟದಲ್ಲಿರುವ ನಿವಾಸಿಗಳು ತಮ್ಮ ವಾಹನಗಳಿಗೆ ಅನುಮತಿ ಪಡೆಯಲು ಅಗತ್ಯ ದಾಖಲಾತಿಗಳಾದ ಡಿ.ಎಲ್, ವಾಹನದ ದಾಖಲಾತಿ, ಮತದಾರರ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳನ್ನು ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಲ್ಲಿಸಿದ್ದಲ್ಲಿ, ಅವುಗಳನ್ನು ಪರಿಶೀಲಿಸಿ ಅಂತಹ ವಾಹನಗಳ ಪ್ರವೇಶಕ್ಕೆ ಕೆಲವು ನಿರ್ಬಂಧನೆಗಳನ್ನು ವಿಧಿಸಿ ಅನುಮತಿ ಪಾಸ್ ಪಡೆಯಬಹುದಾಗಿರುತ್ತದೆ.

ಬಂದೋಬಸ್ತ್‌ಗೆ ಬರುವ ಸರ್ಕಾರಿ ವಾಹನಗಳು ಹಾಗೂ ಪೊಲೀಸ್ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆ, ದೇವಿಕೆರೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು ಕಡ್ಡಾಯವಾಗಿ ಎಲ್ಲಾ ವಾಹನಗಳನ್ನು ದೇವಿಕೆರೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.

ನಗರ ಬಸ್ ನಿಲ್ದಾಣದಿಂದ ಜನರನ್ನು ಕರೆತರುವ ಕೆ.ಎಸ್.ಆರ್.ಟಿ.ಸಿ ರೂಟ್ ಬಸ್ಸುಗಳು ಸಂಗೊಳ್ಳಿ ರಾಯಣ್ಣ ವೃತ್ತ-ಲಲಿತ ಮಹಲ್ ಹೆಲಿಪ್ಯಾಡ್ ವೈ ಜಂಕ್ಷನ್ ಬಳಿ ಬಲ ತಿರುವು ಪಡೆದು ನಂತರ ಲಲಿತಾದ್ರಿಪುರ ರಸ್ತೆಯಲ್ಲಿ ಐವಾಕ್ ರಸ್ತೆ ಮುಖಾಂತರ ಚಾಮುಂಡಿಬೆಟ್ಟಕ್ಕೆ ಹೋಗಬೇಕಾಗಿರುತ್ತದೆ.

ಬೆಟ್ಟದ ಪಾದದಿಂದ ಮೆಟ್ಟಿಲು, ಮುಖಾಂತರ ದೇವಸ್ಥಾನಕ್ಕೆ ಕಾಲು ನಡುಗೆಯಲ್ಲಿ ಹೋಗುವ ಭಕ್ತಾಧಿಗಳು ವಾಹನಗಳನ್ನು ಪಿಂಜರಪೋಲ್ ಮುಂಭಾಗದಲ್ಲಿ ಇರುವ ಮೈದಾನದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ದೇವಸ್ಥಾನಕ್ಕೆ ಹೋಗುವುದು.

ದೇವಸ್ಥಾನದಲ್ಲಿ ಪ್ರತ್ಯೇಕ ಹೆಲ್ಪ್ ಲೈನ್, ವಿದ್ಯುತ್ ದೀಪಗಳ ವ್ಯವಸ್ಥೆ, ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ ಮತ್ತು ಲಲಿತ ಮಹಲ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಭದ್ರತಾ ವ್ಯವಸ್ಥೆ, ತಾತ್ಕಾಲಿಕ ಬಸ್ ನಿಲ್ದಾಣ, ಶೌಚಾಲಯ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ಭಕ್ತಾದಿಗಳು ಯಾವುದೇ ಆತಂಕ ಇಲ್ಲದೇ ವಾಹನಗಳನ್ನು ನಿಲುಗಡೆಗೊಳಿಸಿ ದೇವರ ದರ್ಶನ ಪಡೆಯಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.