ಮೈಸೂರು: ಖಾಸಗಿ ಶಾಲಾ ವಾಹನ ಪಲ್ಟಿಯಾಗಿ 16 ಮಕ್ಕಳು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಬ್ಬನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಪಿರಿಯಾಪಟ್ಟಣ ಬಳಿಯ ಕಂಪಲಪುರದ ಖಾಸಗಿ ಶಾಲೆಯ ವ್ಯಾನ್ ವಿವಿಧ ಗ್ರಾಮದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೊರಟಿತ್ತು. ಈ ಸಂದರ್ಭದಲ್ಲಿ ಹಬ್ಬನಕುಪ್ಪೆ ಗ್ರಾಮದ ತಿರುವಿನಲ್ಲಿ ವಾಹನದ ಟೈರ್ ಪಂಚರ್ ಆಗಿದ್ದು, ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.
ಘಟನೆಯಲ್ಲಿ ಚಾಲಕ ಸೇರಿದಂತೆ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಹಾಗೂ ಸ್ಥಳೀಯ ಠಾಣೆಯ ಪೊಲೀಸರು ರಕ್ಷಣೆಗೆ ಬಂದಿದ್ದಾರೆ. ಸದ್ಯ ಗಾಯಗೊಂಡ ಮಕ್ಕಳನ್ನು ಹುಣಸೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನಿಸಲಾಗಿದೆ.














