ಮನೆ ಕಾನೂನು ವಾಹನದಿಂದ ಜಪ್ತಿ ಮಾಡಿದ ಪ್ರಾಣಿಗಳ ನಿರ್ವಹಣೆಯ ಹೊಣೆ ವಾಹನ ಮಾಲೀಕರದ್ದು: ಬಾಂಬೆ ಹೈಕೋರ್ಟ್

ವಾಹನದಿಂದ ಜಪ್ತಿ ಮಾಡಿದ ಪ್ರಾಣಿಗಳ ನಿರ್ವಹಣೆಯ ಹೊಣೆ ವಾಹನ ಮಾಲೀಕರದ್ದು: ಬಾಂಬೆ ಹೈಕೋರ್ಟ್

0

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಪ್ರಕಾರ ಪ್ರಕರಣದ ವಿಚಾರಣೆ ಮುಗಿಯುವವರೆಗೆ ವಾಹನದಿಂದ ಜಪ್ತಿ ಮಾಡಿದ ಪ್ರಾಣಿಗಳ ಸಾಗಣೆ, ಚಿಕಿತ್ಸೆ ಹಾಗೂ ಆರೈಕೆಯ ಹೊಣೆ ವಾಹನ ಮಾಲೀಕರದ್ದು ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

[ಅಲ್ತಾಫ್ ಬಬ್ರು ಶೇಖ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ವ್ಯಾಜ್ಯಕ್ಕೆ ಒಳಪಟ್ಟಿರುವ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ) ನಿಯಮಾವಳಿ ಪ್ರಕಾರ  ಅರ್ಜಿದಾರರು ಕೇವಲ ವಾಹನದ ಮಾಲೀಕರು ಎಂದ ಮಾತ್ರಕ್ಕೆ ಅವರು ಪ್ರಾಣಿಗಳ ನಿರ್ವಹಣೆ ಮತ್ತು ಆರೋಗ್ಯ ತಪಾಸಣೆಯ ಮೊತ್ತ ಪಾವತಿಸುವ ಹೊಣೆಯಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂದು ನ್ಯಾ. ಪ್ರಕಾಶ್‌ ಡಿ ನಾಯ್ಕ್‌ ಅವರಿದ್ದ ಪೀಠ ಹೇಳಿತು. ಪ್ರಾಣಿಗಳ ನಿರ್ವಹಣೆಗಾಗಿ ಪ್ರತಿದಿನ ರೂ.200/- ಪಾವತಿಸಬೇಕು ಎಂದು ಅದು ಅರ್ಜಿದಾರರಿಗೆ ಸೂಚಿಸಿತು.

ಮುಂಬೈಗೆ 23 ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಪ್ರಾಣಿ  ಸಂರಕ್ಷಣಾ ಕಾಯಿದೆಯ ಸೆಕ್ಷನ್ 11 ಮತ್ತು ಮೋಟಾರು ವಾಹನಗಳ ಕಾಯಿದೆಯ ಸೆಕ್ಷನ್ 192-ಎ ಅಡಿ ಎಮ್ಮೆ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು.

ವಿಚಾರಣೆ ಮುಗಿಯುವವರೆಗೆ ಪ್ರತಿ ಪ್ರಾಣಿಗೆ ದಿನಕ್ಕೆ ₹ 200ರ ನಿರ್ವಹಣಾ ವೆಚ್ಚದಂತೆ ಆರೋಪಿಗಳು ಜಂಟಿಯಾಗಿ ₹ 96,625 ಪಾವತಿಸಬೇಕು ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು. ಈ ತೀರ್ಪನ್ನು ಸೆಷನ್ಸ್‌ ನ್ಯಾಯಾಲಯ ಕೂಡ ಎತ್ತಿಹಿಡಿದಿದ್ದರಿಂದ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಾದಗಳನ್ನು ಆಲಿಸಿದ ಹೈಕೋರ್ಟ್‌ “ಸೆಷನ್ಸ್‌ ನ್ಯಾಯಾಧೀಶರು ನಿಯಮ 5 ನ್ನುಉಲ್ಲೇಖಿಸಿದ್ದಾರೆ. ಟ್ರಕ್‌’ನ ಮಾಲೀಕ ಮತ್ತಿತರರು ಪ್ರಾಣಿಗಳ ಸಾಗಣೆ, ಚಿಕಿತ್ಸೆ ಮತ್ತು ಆರೈಕೆಯ ವೆಚ್ಚವನ್ನು ಜಂಟಿಯಾಗಿ ಭರಿಸಬೇಕು ಎಂದು ಅವರು ನೀಡಿರುವ ತೀರ್ಪು ಸೂಕ್ತವಾಗಿದೆ” ಎಂದಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.