ಮನೆ ರಾಜ್ಯ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ನಾಳೆ ಕರ್ನಾಟಕಕ್ಕೆ ಮೊದಲ ಭೇಟಿ..!

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ನಾಳೆ ಕರ್ನಾಟಕಕ್ಕೆ ಮೊದಲ ಭೇಟಿ..!

0

ಬೆಂಗಳೂರು : ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡ ನಂತರ (ನಾಳೆ) ನ.9 ರಂದು ಕರ್ನಾಟಕಕ್ಕೆ ಮೊದಲ ಭೇಟಿ ನೀಡಲಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ 4ನೇ ಬೆಟ್ಟದ ಪದನಾಮ ಅನಾವರಣ ಹಾಗೂ ಆಚಾರ್ಯ ಶ್ರೀ 108ನೇ ಶಾಂತಿಸಾಗರ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದೆ. ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ.

ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಅಂಗ ಸಂಸ್ಥೆಯಾಗಿರುವ ಮೈಸೂರಿನಲ್ಲಿರುವ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಹದಿನಾರನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ಸುತ್ತೂರು ಮಠದ ಹಳೆಯ ಆವರಣಕ್ಕೂ ಉಪರಾಷ್ಟ್ರಪತಿ ಅವರು ಭೇಟಿ ನೀಡಲಿದ್ದಾರೆ. ಅವರು ಮೈಸೂರಿನ ಬಳಿಯ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಮತ್ತು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ನಾಳೆ ಬೆಳಗ್ಗೆ 8:45 ಕ್ಕೆ ಶ್ರವಣಬೆಳಗೊಳದ ಹೆಲಿಪ್ಯಾಡ್‌ಗೆ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಚಿವ ಡಿ.ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಸ್ವಾಗತಿಸಲಿದ್ದಾರೆ. ಶಾಸಕ ಅಭಯ್ ಪಾಟೀಲ, ಎಂಎಲ್‌ಸಿ ಡಾ.ಸೂರಜ್ ರೇವಣ್ಣ, ರಾಜ್ಯಸಭಾ ಸದಸ್ಯ ನವೀನ್ ಜೈನ್ ಹಾಗೂ ಮಹಾರಾಷ್ಟ್ರದ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಶ್ರೀ ಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ಬೆಳಗ್ಗೆ 9:05 ಕ್ಕೆ ಬೆಟ್ಟದ ನಾಮಕರಣ ಮತ್ತು ವಿಗ್ರಹ ಅನಾವರಣ ಮಾಡಲಿದ್ದಾರೆ. 10:15 ಕ್ಕೆ ಹೆಲಿಕಾಪ್ಟರ್ ಮೂಲಕ ನಿರ್ಗಮಿಸಲಿದ್ದಾರೆ. ಹದಿನೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾನವ ರಹಿತ ಏರ್‌ಕ್ರಾಫ್ಟ್ ಹಾಗೂ ಏರ್ ಬಲೂನ್ ಬಳಕೆ, ಹಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಆದೇಶ ಹೊರಡಿಸಿದ್ದು, ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂಬ ಮಾಹಿತಿ ವರದಿಯಾಗಿದೆ.