ನವದೆಹಲಿ(New Delhi): ಉಪರಾಷ್ಟ್ರಪತಿ ಆಯ್ಕೆಗಾಗಿ ಇಂದು ಮತದಾನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮತ ಚಲಾವಣೆ ಮಾಡಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ. ಇಂದೇ ಫಲಿತಾಂಶ ಹೊರಬೀಳಿದೆ.
ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ (71) ಎನ್ಡಿಎ ಅಭ್ಯರ್ಥಿಯಾಗಿದ್ದರೆ, ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ (80) ಕಣಕ್ಕಿಳಿದಿದ್ದಾರೆ.
ಆಡಳಿತಾರೂಢ ಬಿಜೆಪಿಯು ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿದ್ದು, ರಾಜ್ಯಸಭೆಯಲ್ಲಿ 91 ಸದಸ್ಯರ ಬಲವಿದೆ. ಹೀಗಾಗಿ ಧನಕರ್ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ. ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು ಆಗಸ್ಟ್ 10 ರಂದು ಕೊನೆಗೊಳ್ಳಲಿದೆ.
ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಸಂಸತ್ತಿನ ಎರಡು ಸದನಗಳಿಂದ ಒಟ್ಟು 788 ಮತಗಳಿವೆ. ರಾಜ್ಯಸಭೆಯಲ್ಲಿ ಎಂಟು ಸ್ಥಾನಗಳು ಖಾಲಿ ಉಳಿದಿವೆ. ಹೀಗಾಗಿ 780 ಮಂದಿ ಮಾತ್ರ ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.