ಹಾವೇರಿ : ಜನಮನದಲ್ಲಿ ಆಕ್ರೋಶ ಹುಟ್ಟಿಸಿದ ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಐವರು, ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾದ ನಂತರ ರೋಡ್ ಶೋ ನಡೆಸಿದ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ನ್ಯಾಯಾಲಯದ ಶರತ್ತುಗಳನ್ನು ಉಲ್ಲಂಘಿಸಿ ಸಾರ್ವಜನಿಕ ಜಾಗದಲ್ಲಿ ವಿಜಯೋತ್ಸವ ಆಚರಿಸಿದ ಆರೋಪದ ಮೇಲೆ, ಪೊಲೀಸರು ಮತ್ತೊಮ್ಮೆ ಆಪಾದಿತರನ್ನು ಬಂಧಿಸಿದ್ದಾರೆ.
2024ರ ಜನವರಿ 8 ರಂದು ಹಾವೇರಿ ಜಿಲ್ಲೆಯ ಹಾನಗಲ್ ಬಳಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇವರಲ್ಲಿ 12 ಜನರು ಮುಂಚಿತವಾಗಿ ಜಾಮೀನಿನಲ್ಲಿ ಬಿಡುಗಡೆ ಆಗಿದ್ದರು, ಉಳಿದ 7 ಜನರಿಗೆ ಮೇ 20ರಂದು ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಜಾಮೀನಿನ ಮೇಲೆ ಬಿಡುಗಡೆಗೊಂಡವರಲ್ಲಿ ಕೆಲವು ಆರೋಪಿಗಳು, ಜೈಲಿನಿಂದ ಹೊರಬಂದು ಹಾವೇರಿಯಿಂದ ಅಕ್ಕಿಆಲೂರುವರೆಗೂ ಕಾರು ಮತ್ತು ಬೈಕ್‌ಗಳಲ್ಲಿ ವಿಜಯೋತ್ಸವ ನಡೆಸಿದರು. ಈ ವೇಳೆ ಅವರು ವಾಹನಗಳಲ್ಲಿ ಶಬ್ದಯಂತ್ರಗಳೊಂದಿಗೆ ಡೊಳ್ಳು ತಾಳಗಳ ಶಬ್ದದ ನಡುವೆ ಸಂಚರಿಸಿದರು. ಈ ದೃಶ್ಯಗಳೆಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಜನತೆಯ ಗಂಭೀರ ವಿರೋಧವನ್ನೂ ಹುಟ್ಟಿಸಿತು.
ಸಮಾಜಮುಖಿ, ಗಂಭೀರ ಅಪರಾಧ ಪ್ರಕರಣದಲ್ಲಿ ಆರೋಪಿಗಳಾದವರು ಜಾಮೀನಿನ ನಂತರ ಸಂಭ್ರಮ ಆಚರಿಸುವುದು ನ್ಯಾಯಾಂಗ ನಿಯಮಗಳ ಉಲ್ಲಂಘನೆ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ. ಆರೋಪಿಗಳ ವರ್ತನೆ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತೆ ಬಂಧಿಸಲಾದ ಆರೋಪಿಗಳು ಹಾನಗಲ್ ತಾಲ್ಲೂಕಿನ ಅಕ್ಕಿಆಲೂರ ಕಮಾಟಿಗೇರ ಓಣಿಯ ಸಮೀವುಲ್ಲಾ ಅಬ್ದುಲ್‌ವಾಹೀದ್ ಲಾಲಾನವರ (28), ಇಮಾಮನಗರದ ಮಹ್ಮದಸಾದಿಕ್ ಬಾಬುಸಾಬ ಅಗಸಿಮನಿ (30), ಹಳ್ಳೂರ ಓಣಿಯ ಶೋಹಿಬ ನಿಯಜಅಹ್ಮದ್ ಮುಲ್ಲಾ ಉರುಫ್ ಶೋಯಬ್ (20) ಹಾಗೂ ಇಸ್ಲಾಂಪುರ ಓಣಿಯ ರಿಯಾಜ್ ಅಬ್ದುಲ್‌ರಫೀಕ್ ಸಾವಿಕೇರಿ (32) ಎಂದು ತಿಳಿದುಬಂದಿದೆ. ಇವರ ವಿರುದ್ಧ ಜಾಮೀನು ನಿಯಮ ಉಲ್ಲಂಘನೆಯ ಅಡಿಯಲ್ಲಿ ಪುನಃ ಕ್ರಮ ಕೈಗೊಳ್ಳಲಾಗಿದೆ.
ಜನಸಾಮಾನ್ಯರಲ್ಲಿ ಈ ಪ್ರಕರಣದಿಂದ ವ್ಯಕ್ತವಾದ ಆಕ್ರೋಶದ ಮಧ್ಯೆ ಪೊಲೀಸರು ಗಂಭೀರ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.















