ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದನ ಮಾಡುತ್ತಿರುವಂತೆ ಚಿತ್ರಿಸಲಾಗಿದ್ದ ವೀಡಿಯೊ ಅಪ್‌ಲೋಡ್ ಮಾಡಿ ಜಮ್ಮು ಕಾಶ್ಮೀರ ಪೊಲೀಸರಿಂದ ಬಂಧಿತನಾಗಿದ್ದ ಯೂಟ್ಯೂಬಿಗ ಫೈಸಲ್ ವಾನಿಗೆ ಶ್ರೀನಗರ ನ್ಯಾಯಾಲಯ ಜಾಮೀನು ನೀಡಿದೆ.
ಆರೋಪಿಯ ವಿರುದ್ಧದ ಅಪರಾಧಗಳು ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಗಾಗುವಂತಹದ್ದಲ್ಲ. ಅಲ್ಲದೆ ಆರೋಪಿ ದೇಶದಿಂದ ಪಲಾಯನ ಮಾಡುವ ಸಂದರ್ಭವಾಗಲೀ, ಕ್ರಿಮಿನಲ್ ಹಿನ್ನೆಲೆಯಾಗಲೀ ಇಲ್ಲ. ಹಾಗಾಗಿ ಇಂತಹ ಪ್ರಕರಣದಲ್ಲಿ ಜಾಮೀನು ನಿರಾಕರಿಸುವುದು ಅನ್ಯಾಯವಾಗುತ್ತದೆ ಎಂದು ಜಾಮೀನು ನೀಡುವ ವೇಳೆ ಶ್ರೀನಗರದ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ಅವರು ಅಭಿಪ್ರಾಯಪಟ್ಟರು.
“ಆರೋಪಿ ಕಳೆದ 7 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಕಾನೂನಿನಡಿ ಗಂಭೀರ ಶಿಕ್ಷೆ ನೀಡಲಾಗುವ ಅಪರಾಧಗಳನ್ನು ಆರೋಪಿಯು ಎಸಗುಕ್ಕ. ಆರೋಪಿ ನ್ಯಾಯ ಪ್ರಕ್ರಿಯೆಯಿಂದ ಪಲಾಯನ ಮಾಡುವ ಯಾವುದೇ ಸಾಧ್ಯತೆಗಳಿಲ್ಲ. ಆತನನ್ನು ಇನ್ನಷ್ಟು ಕಾಲ ಬಂಧನದಲ್ಲಿಡುವುದರಿಂದ ಯಾವುದೇ ಉಪಯುಕ್ತ ಉದ್ದೇಶವೂ ಈಡೇರದು. ಇಂತಹ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನಿರಾಕರಿಸುವುದು ಅನ್ಯಾಯವಾಗುತ್ತದೆ” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 505(2) (ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಹೇಳಿಕೆ) ಹಾಗೂ 506ರ(ಬೆದರಿಕೆ) ಅಡಿಆರೋಪಿಯನ್ನು ಬಂಧಿಸಲಾಗಿತ್ತು. ಅಪ್‌ಲೋಡ್ ಮಾಡಿದ ಕೂಡಲೇ ವೀಡಿಯೊ ಡಿಲೀಟ್ ಮಾಡಿ ನಂತರ ಕ್ಷಮೆ ಕೋರುವ ಮತ್ತೊಂದು ವೀಡಿಯೊವನ್ನು ಆರೋಪಿ ಹಾಕಿದ್ದ ಎಂದು ವಾನಿ ಪರ ವಕೀಲರು ವಾದಿಸಿದ್ದರು.
[ಫೈಸಲ್ ಫಯಾಜ್ ವಾನಿ ಮತ್ತು ಸಫಾ ಕದಲ್ ಠಾಣಾಧಿಕಾರಿ ಮೂಲಕ ಜಮ್ಮ ಕಾಶ್ಮೀರ ಕೇಂದ್ರಾದಳಿತ ಪ್ರದೇಶ ನಡುವಣ ಪ್ರಕರಣ.]