ಬೆಂಗಳೂರು (Bengaluru)- ವಿಧಾನ ಪರಿಷತ್ ಚುನಾವಣೆಗಾಗಿ ಹೈಕಮಾಂಡ್ ಗೆ ಶಿಫಾರಸು ಮಾಡಬೇಕಾದ ಅಭ್ಯರ್ಥಿ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಚರ್ಚಿಸಿ, ಒಮ್ಮತದಿಂದ ಹೆಸರನ್ನು ಕಳುಹಿಸಲಾಗುವುದು, ಎರಡು ಸ್ಥಾನಗಳು ಮಾತ್ರ ಇವೆ. ಎಷ್ಟು ಹೆಸರನ್ನು ಕಳುಹಿಸಲು ಸಾಧ್ಯ?ಎಲ್ಲಾ ಅಂಶಗಳನ್ನು ಪರಿಗಿಣಿಸಿ ಹೆಸರನ್ನು ಶಿಫಾರಸು ಮಾಡಲಾಗುವುದು, ಹೈಕಮಾಂಡ್ ಅಂತಿಮವಾಗಿ ನಿರ್ಧರಿಸಲಿದೆ ಎಂದು ಹೇಳಿದರು.
ಮೇಲ್ಮನೆಯ ಏಳು ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 24 ಕೊನೆಯ ದಿನವಾಗಿದ್ದು, ಅಭ್ಯರ್ಥಿ ಹೆಸರನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಿ, ಹೈಕಮಾಂಡ್ ಗೆ ಶಿಫಾರಸು ಮಾಡಲಾಗುವುದು ಎಂದರು.
ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ಹಂಚಿಕೊಳ್ಳುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿದೆ. ಸುಮಾರು 100 ಆಕಾಂಕ್ಷಿಗಳಿದ್ದಾರೆ. ಕೆಲವರು ಮನವಿ ಸಲ್ಲಿಸಿಲ್ಲ. ಆದರೆ, ಬೇಕಾದ ಅರ್ಹತೆ ಹೊಂದಿದ್ದಾರೆ. ಎಲ್ಲರನ್ನೂ ಪರಿಗಣಿಸಿ ಶಿಫಾರಸ್ಸು ಮಾಡಲಾಗುವುದು. ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ರಾಜ್ಯ ಘಟಕ ಹೆಸರನ್ನು ಮಾತ್ರ ಶಿಫಾರಸು ಮಾಡಲಿದೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.














