ಮನೆ ಸ್ಥಳೀಯ ವಿದ್ಯಾ ನೈಪುಣ್ಯ, ಪರಿಪೂರ್ಣತೆ ಸಾಧಿಸುವ ಮಾರ್ಗ: ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು

ವಿದ್ಯಾ ನೈಪುಣ್ಯ, ಪರಿಪೂರ್ಣತೆ ಸಾಧಿಸುವ ಮಾರ್ಗ: ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು

0

ಮೈಸೂರು: ಮನುಷ್ಯ ಜೀವಿಸುವ ಸಲುವಾಗಿ ಅನ್ನ, ನೀರು, ತೃಪ್ತಿಯ ಘಟ್ಟ ತಲುಪಿಸುತ್ತವೆ, ಆದರೆ ಜ್ಞಾನ ಮಾರ್ಗದಲ್ಲಿ  ಪರಿಪೂರ್ಣತೆ ಹೊಂದಲು ಮಕ್ಕಳು ‘ವಿದ್ಯಾ ನೈಪುಣ್ಯತೆ’ ಪಡೆಯುವ ಸಂಕಲ್ಪತೊಡಬೋಕೆಂದು ಯಡತೊರೆ ಶ್ರೀ ಯೋಗಾನಂದೇಶ್ವರ ಮಠದ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ನುಡಿದರು.

Join Our Whatsapp Group

ಅವರು ಕನಕದಾಸನಗರದಲ್ಲಿ (ದಟ್ಟಗಳ್ಳಿ) ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ನ ನೂತನ ಶಾಲಾ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಶ್ರೀಗಳ ಪಾದ ಪೂಜೆಯನ್ನು ಸ್ವೀಕರಿಸಿ  ಆಶೀರ್ವಚನ ನೀಡಿದರು.

ವಿದ್ಯೆಯೆಂದರೆ ಕೇವಲ ಅಕ್ಷರ ಕಲಿಕೆಯಲ್ಲ. ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುವ ಸಂಸ್ಕಾರ ಪಡೆಯುವುದೇ ಆಗಿದೆ. ವಿದ್ಯೆಯಲ್ಲಿ ವಿವಿಧ ವಿಷಯಗಳ ಶಾಸ್ತ್ರ  ಅಧ್ಯಯನಕ್ಕೆ ಅವಕಾಶವಿದೆ, ಇವೆಲ್ಲವೂ  ವ್ಯಾಪಾರಿ ಸ್ಪರ್ಷದ ಕಾರಣಕ್ಕಾಗಿ ರೂಪಿಸಿರುವುದಲ್ಲ. ಸಮಾಜಮುಖಿಯಾಗಿ, ಜೀವ ಜಗತ್ತಿನ ಕಲ್ಯಾಣಕ್ಕಾಗಿ ಸಮರ್ಪಣೆಯಿಂದ ಕಾರ್ಯ ನಿರ್ವಹಿಸುವ ಮಾರ್ಗ ತೋರಿಸುವುದಕ್ಕಾಗಿ ಎನ್ನುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿಯಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯ ಪರಂಪರೆಯ ಶಿಕ್ಷಣ ಅತ್ಯಂತ ಶ್ರೇಷ್ಠವಾದದ್ದು, ನಮ್ಮ ಶಿಕ್ಷಣ ಮಾನವೀಯ ಮೌಲ್ಯವನ್ನು ತಿಳಿಸಿ  ಸಾಧಿಸುವ ಮಾರ್ಗ ತೋರುವ  ಪದ್ಧತಿಯಾಗಿದೆ ಎಂದು ಹೇಳಿದರು.

ನೈಪುಣ್ಯ ವಿದ್ಯಾ ಸಂಸ್ಥೆಯು ಕೇವಲ ಎರಡು ವರ್ಷ ಪೂರೈಸುವುದರೊಳಗಾಗಿ ನಗರದಲ್ಲಿ ಎರಡು ಸಂಸ್ಥೆಗಳನ್ನು ಸಮಾಜಕ್ಕೆ ಸಮರ್ಪಣೆ ಮಾಡಿರುವುದು ಅತ್ಯಂತ ಸಂತೋಷದ ವಿಚಾರವಾಗಿದ್ದು, ಸಂಸ್ಥೆಯ ಆಡಳಿತ ಮಂಡಳಿಯ ಶಿಕ್ಷಣ ಶೃದ್ಧೆ ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ.

‘ನೈಪುಣ್ಯ’ ಎಂಬ ಹೆಸರೇ ವಿದ್ಯೆಯ ಪರ್ಯಾಯ ಅರ್ಥವಾಗಿದ್ದು ನೈಪುಣ್ಯ ಹೆಸರನ್ನೊತ್ತ ಸಂಸ್ಥೆಯು ಭಾರತೀಯ ಪರಂಪರೆಯ ಶಿಕ್ಷಣದ ಜೊತೆಗೆ ಜಾಗತಿಕ ಮಟ್ಟದಲ್ಲಿ ನಮ್ಮ ಭವಿಷ್ಯದ ಮಕ್ಕಳು ಪೈಪೋಟಿ ನಡೆಸುವಂತಾಗಲು ಉತ್ತಮ ಶಿಕ್ಷಣವನ್ನು ಕೊಡಮಾಡುವುದರ ಜೊತೆಗೆ ದೇಶ ಕಟ್ಟುವ ಸತ್ಪ್ರಜೆಗಳನ್ನು ರೂಪಿಸಲಿ ಎಂದು ಕರೆ ನೀಡಿದರು.

ಯಾವ ಮಗುವಿನಲ್ಲಿ ಎಂತಹ ಸಾಧಕ ಅಡಗಿ ಕುಳಿತಿರುತ್ತಾನೋ ಯಾರು ಬಲ್ಲವರು? ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಗುವನ್ನು ಭವಿಷ್ಯದ ಮಹಾನ್‌ ಸಾಧಕನೆಂದೇ ಪಾಠ ಕಲಿಸುವ ಶಿಕ್ಷಕರು ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ತೊಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಟಾರ್‌ ಆಫ್‌ ಮೈಸೂರು ಮೈಸೂರು ಮಿತ್ರ ಪತ್ರಿಕೆಗಳ ಪ್ರಧಾನ ಸಂಪಾದಕರಾದ ಕೆ. ಬಿ.ಗಣಪತಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಆರ್‌ ರಘು, ಕಾರ್ಯದರ್ಶಿ ಕೌಟಿಲ್ಯ, ಟ್ರಸ್ಟಿ ವರ್ಣಿಕ ಹಾಗೂ ಸಂಸ್ಥೆಯ ಡೀನ್‌ ಶ್ರೀಮತಿ ವಿಜಯಾ ಅಯ್ಯರ್‌ ಉಪಸ್ಥಿತರಿದ್ದರು. ನೂರಾರು ಪೋಷಕರು, ಅಧ್ಯಾಪಕ ವರ್ಗ ಭಾಗವಹಿಸಿತ್ತು.

ಹಿಂದಿನ ಲೇಖನಪ್ರತಿ ಬೂತ್‌ ನಲ್ಲಿ ಚಲಾವಣೆಯಾದ ಒಟ್ಟು ಮತ ಮಾಹಿತಿ ಪ್ರಕಟಿಸಲು ಇಸಿಐಗೆ ನಿರ್ದೇಶಿಸಲು ಸುಪ್ರೀಂ ನಕಾರ
ಮುಂದಿನ ಲೇಖನತಾಲ್ಲೂಕು, ಜಿಲ್ಲಾ ಪಂಚಾಯತಿ  ಹಾಗೂ ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧ : ಮುಖ್ಯಮಂತ್ರಿ ಸಿದ್ದರಾಮಯ್ಯ