ಮನೆ ದೇವಸ್ಥಾನ ಕ್ಷಿಪ್ರವಾಗಿ ವರ ಪ್ರಸಾದಿಸುವ ವಿಘ್ನೇಶ್ವರ ಮಂದಿರ

ಕ್ಷಿಪ್ರವಾಗಿ ವರ ಪ್ರಸಾದಿಸುವ ವಿಘ್ನೇಶ್ವರ ಮಂದಿರ

0

ಗಣಪತಿ ಆದಿ ವಂದಿಪ. ಗಣಪನಿಲ್ಲದ ಊರೇ ಇಲ್ಲ. ಊರಿನಲ್ಲಷ್ಟೇ ಅಲ್ಲ, ರಾಮನ ಮಂದಿರವೇ ಇರಲಿ, ಲಕ್ಷ್ಮೀ ದೇವಾಲಯವೇ ಇರಲಿ ಅಥವಾ  ಬೇರೆ ಯಾವುದೇ ದೇವರ ದೇವಾಲಯವಿದ್ದರೂ ಅಲ್ಲಿ ವಿಘ್ನ ನಿವಾರಕ ವಿನಾಯಕನ ಮೂರ್ತಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಗಣಪತಿಗಾಗಿಯೇ ಪ್ರತ್ಯೇಕವಾದ ನೂರಾರು ದೇವಾಲಯಗಳು ರಾಜ್ಯದಲ್ಲಿವೆ.

Join Our Whatsapp Group

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಹ ಬಸವನಗುಡಿ ದೊಡ್ಡ ಗಣಪತಿ ದೇವಾಲಯ, ಮಲ್ಲೇಶ್ವರದ ಮಹಾಗಣಪತಿ ದೇವಾಲಯ, ಹನುಮಂತನಗರದ ಪಂಚಮುಖಿ ಗಣಪತಿ ದೇವಾಲಯ, ಜ್ಞಾನಭಾರತಿಯ ವಿದ್ಯಾ ಗಣಪತಿ ದೇವಾಲಯ ಹೀಗೆ ಗಣಪತಿಯ ನೂರಾರು ಗುಡಿಗಳಿವೆ.  ಈ ಪೈಕಿ ಜಯನಗರ ನಾಲ್ಕನೇ ಬ್ಲಾಕ್ ಪಶ್ಚಿಮದ 7ನೇ ಬಿ ಮೇನ್, ನಲ್ಲಿರುವ ಶ್ರೀ ವಿನಾಯಕ ಸ್ವಾಮಿ ದೇವಾಲಯವೂ  ಪ್ರಮುಖವಾದದ್ದು.

ಬೆಂಗಳೂರು ಮಹಾನಗರದ ಪ್ರತಿಷ್ಠಿತ ಹಾಗೂ ಶ್ರೀಮಂತರ ಬಡಾವಣೆ ಎಂದೇ ಖ್ಯಾತವಾದ ಜಯನಗರದಲ್ಲಿರುವ ಈ ಗಣಪನನ್ನು ಕೂಡ ಭಕ್ತರು ಶ್ರೀಮಂತ ಗಣಪ ಎಂದೇ ಕರೆಯುತ್ತಾರೆ ಕಾರಣ ಭಕ್ತರು ಈ ದೇವರಿಗೆ ನೀಡಿರುವ ನವರತ್ನ ಖಚಿತವಾದ ವಜ್ರ, ಸುವರ್ಣ ಕವಚ ಕಾಣಿಕೆಗಳು ಈ ವಿನಾಯಕನನ್ನು ಶ್ರೀಮಂತಗೊಳಿಸಿವೆ.

ವಜ್ರ ಕಿರೀಟ, ವಜ್ರ ಕವಚ, ಚಿನ್ನದ ಕವಚ, ಚಿನ್ನದ ಕಿರೀಟಗಳ ಅಲಂಕಾರದಲ್ಲಿ ವಿನಾಯಕನ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲವು. ಜಯನಗರ ಕಾಂಪ್ಲೆಕ್ಸ್ ಗೆ ಅನತಿ ದೂರದಲ್ಲಿ 8 ರಸ್ತೆಗಳು ಸೇರುವ ಅಪರೂಪದ ಸಂಗಮ ಸ್ಥಳದಲ್ಲಿ ಹಾಗೂ ಎರಡು ರಸ್ತೆಗಳ ನಡುವೆ ಇರುವ ಈ ದೇವಾಲಯ ವಿಶಾಲವಾದ ಪ್ರಾಕಾರ, ಮುಖಮಂಟಪ, ಗರ್ಭಗೃಹವನ್ನು ಒಳಗೊಂಡಿದೆ.

ಈಗ್ಗೆ 40 ವರ್ಷಗಳ ಹಿಂದೆ ಅಂದರೆ 1976ರಲ್ಲಿ ಇಲ್ಲಿ ಪುಟ್ಟ ದೇವಾಲಯ ನಿರ್ಮಿಸಲಾಗಿತ್ತು. ಅದಕ್ಕೂ ಮುನ್ನ ಇಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ಪುಟ್ಟದೊಂದು ಗಣಪತಿ ವಿಗ್ರಹವಿತ್ತಂತೆ. ಆಗ ಜಯನಗರ ಸುತ್ತಮುತ್ತಲ ಪ್ರದೇಶದಲ್ಲಿ ವಾಸವಾಗಿದ್ದ ಜನ, ಇಲ್ಲಿ ಅರಳಿ ಮರದ ಕೆಳಗಿದ್ದ ಗಣಪನಿಗೆ ತಮ್ಮ ಮನೆಯಂಗಳದಲ್ಲಿ ಬಿಟ್ಟ ಹೂ ತಂದು ಪೂಜಿಸಿ, ಕೈ ಮುಗಿದು ಹೋಗುತ್ತಿದ್ದರಂತೆ. ಈ ಗಣಪನಿಗೆ ಪೂಜಿಸಿ ಹೋದರೆ ಎಲ್ಲ ಕೆಲಸವೂ ಸುಸೂತ್ರವಾಗಿ ನಡೆಯುತ್ತಿತ್ತಂತೆ. ಹೀಗಾಗಿ ಕ್ಷಿಪ್ರ ವರ ಪ್ರದಾನ ಮಾಡುವ ಗಣಪ ಎಂದೇ ಈ ಗಣಪತಿ ಖ್ಯಾತನಾದನಂತೆ. 1976ರಲ್ಲಿ ಪ್ರೊ.ಮುರುಗೇಂದ್ರಪ್ಪ, ಕರಿಬಸಪ್ಪ, ಬಿ. ಬಸವಯ್ಯ, ಸಣ್ಣಪ್ಪನವರು, ಸಾಂಬಯ್ಯ, ನಾರಾಯಣಶೆಟ್ಟಿ ಹಾಗೂ ಅನಂತಾಚಾರ್ ಸೇರಿದ ಹತ್ತೂ ಸಮಸ್ತರು ಸೇರಿ, ಆಗಿನ ಬೆಂಗಳೂರು ನಗರ ಕಮಿಷನರ್ ಎನ್.ಲಕ್ಷ್ಮಣ್ ರಾವ್ ಅವರನ್ನು ಭೇಟಿ ಮಾಡಿ, ಈ ಜಾಗದಲ್ಲಿ ದೇವಾಲಯ ನಿರ್ಮಿಸಲು ಅನುಮತಿ ಪಡೆದು ಪುಟ್ಟ ದೇವಾಲಯ ನಿರ್ಮಿಸಿದರಂತೆ.

ಈಗ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದ್ದು, 2011ರ ಜುಲೈ 31ರಿಂದ ಆಗಸ್ಟ್ 4ರವರೆಗೆ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ದೇವಾಲಯವನ್ನು ವೀರಾಪುರ ಹಿರೇಮಠದ ಡಾ. ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಈಗಿನ ಹೊಸ ದೇವಾಲಯ ಭದ್ರವಾದ ಕಲ್ಲಿನ ಕಟ್ಟಡದ್ದಾಗಿದೆ. ದೇವಾಲಯಕ್ಕೆ ನಾಲ್ಕೂ ಕಡೆ  ಸುಂದರ ಗೋಪುರಗಳನ್ನು ನಿರ್ಮಿಸಲಾಗಿದ್ದು ದೇವಾಲಯದ ಅಂದ ಹೆಚ್ಚಿದೆ. ಪ್ರಧಾನಗರ್ಭಗೃಹದಲ್ಲಿ ಸುಂದರವಾದ ಗಣಪತಿಯ ಮೂರ್ತಿಯಿದೆ. ಗರ್ಭಗೃಹದ ಬಾಗಿಲವಾಡಗಳನ್ನು ಬೆಳ್ಳಿಯ ತಗಡುಗಳಿಂದ ಅಲಂಕರಿಸಲಾಗಿದೆ. ಬಾಗಿಲವಾಡದಲ್ಲಿರುವ ಬೆಳ್ಳಿಯ ಅಲಂಕರಣಿಕೆಯಲ್ಲಿ ಗಣಪತಿ, ಶಿವಪಾರ್ವತಿ, ಲಕ್ಷ್ಮೀನಾರಾಯಣನ ಮೂರ್ತಿಗಳೂ ಇವೆ.

ಕಪ್ಪು ಗ್ರಾನೈಟ್ ಶಿಲೆಯಿಂದ ಅಲಂಕರಿಸಲಾಗಿರುವ ಈ ದೇವಾಲಯದಲ್ಲಿ ಸ್ವಚ್ಛತೆಗೆ ಆದ್ಯತೆ. ಎಲ್ಲ ದೇವಾಲಯಗಳಲ್ಲಿ ವರ್ಷಕ್ಕೆ ಒಂದು ದಿನ ಜಾತ್ರೆ ನಡೆದರೆ, ಇಲ್ಲಿ ನಿತ್ಯವೂ ಭಕ್ತರ ಜಾತ್ರೆಯೇ ನಡೆಯುತ್ತದೆ. ಕರ್ನಾಟಕ ವಷ್ಟೇ ಅಲ್ಲದೆ, ದೇಶದ ನಾನಾ ಮೂಲೆಗಳಿಂದ ಕೂಡ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಬೆಂಗಳೂರಿಗೆ ಬಂದಾಗ ಈ ದೇವಾಲಯಕ್ಕೆ ಭೇಟಿ ನೀಡದೆ ಹೋಗುವುದೇ ಇಲ್ಲ. ಇದಕ್ಕೆ ಕಾರಣ ಈ ಗಣಪ ಬೇಡಿದ ವರನೀಡುವ ಕರುಣಾಸಾಗರ.

ಭಕ್ತಿಯಿಂದ ಬೇಡಿದರೆ ಬೇಡಿದ್ದನ್ನು ಕರುಣಿಸುತ್ತಾನೆಂದು ಭಕ್ತರು ನಂಬಿದ್ದಾರೆ. ತಮ್ಮ ಹರಕೆ ಈಡೇರಿಸಿದ ಭಗವಂತನಿಗೆ ನಾನಾ ವಿಧದ ವಸ್ತುಗಳನ್ನು ಕಾಣಿಕೆಯಾಗಿ ನೀಡಿ ತಮ್ಮ ಕೃತಜ್ಞತೆ ಸಮರ್ಪಿಸುತ್ತಾರೆ.

ಪ್ರತಿ ತಿಂಗಳು ಸಂಕಷ್ಟ ಹರ ಚತುರ್ಥಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಚನ್ನವೀರ ದೇವರ ನೇತೃತ್ವದಲ್ಲಿ ಇಲ್ಲಿ ಪ್ರತಿ ನಿತ್ಯ ಪ್ರಾತಃಕಾಲದಲ್ಲಿ ಅಭಿಷೇಕ ನಡೆಯುತ್ತದೆ. ನಂತರ ದೇವರಿಗೆ ವಿವಿಧ ಅಲಂಕಾರ ಮಾಡಿದ ಬಳಿಕ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ.

ಹಿಂದಿನ ಲೇಖನಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣ: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಮುಂದಿನ ಲೇಖನಸಹೋದರರ ನಡುವೆ ಗಲಾಟೆ: ತಮ್ಮನಿಂದಲೇ ಅಣ್ಣನ ಕೊಲೆ