ಮನೆ ದೇವಸ್ಥಾನ ಗುಂಡ್ಲುಪೇಟೆಯ ವಿಜಯ ನಾರಾಯಣ ಮಂದಿರ

ಗುಂಡ್ಲುಪೇಟೆಯ ವಿಜಯ ನಾರಾಯಣ ಮಂದಿರ

0

ಕಬಿನಿ ನದಿಯ ಉಪ ನದಿಯಾದ ಗುಂಡ್ಲುಹೊಳೆಯ ಎಡ ದಂಡೆಯ ಮೇಲಿರುವ ಊರೇ ಗುಂಡ್ಲುಪೇಟೆ. ಹಿಂದೆ ತೆರಕಣಾಂಬಿಯ ಅರಸರ ಅಧೀನದಲ್ಲಿದ್ದ ಈ ಊರಿಗೆ ವಿಜಯಪುರವೆಂಬ ಹೆಸರೂ ಇತ್ತು. 1674ರಲ್ಲಿ ಈ ಊರನ್ನು ವಶಪಡಿಸಿಕೊಂಡ ಮೈಸೂರಿನ ಅಂದಿನ ಅರಸು ಚಿಕ್ಕದೇವರಾಜ ಒಡೆಯರು ಗುಂಡಲ್ ನದಿ ದಂಡೆಯ ಈ ವಾಣಿಜ್ಯ ಸ್ಥಳಕ್ಕೆ ಗುಂಡ್ಲುಪೇಟೆ ಎಂದು ಹೆಸರಿಟ್ಟರು ಎಂದು ಇತಿಹಾಸ ಸಾರುತ್ತದೆ.

ಹೊಯ್ಸಳರ ದೊರೆ ವಿಷ್ಣುವರ್ಧನ ಗುಂಡ್ಲು ಪೇಟೆಯಲ್ಲಿ ವಿಜಯ ನಾರಾಯಣ ದೇವಾಲಯ ನಿರ್ಮಿಸಿದ ಎಂದು ತಿಳಿದುಬರುತ್ತದೆ. ವಿಷ್ಣುವರ್ಧನ ನಿರ್ಮಿಸಿದ ಪಂಚ ನಾರಾಯಣ ಕ್ಷೇತ್ರದಲ್ಲಿ ಇದೂ ಒಂದು ಎಂದೂ ಹೇಳಲಾಗುತ್ತದೆ. ಉಳಿದ ನಾಲ್ಕು ದೇವಾಲಯಗಳು ಗದಗಿನ ವೀರನಾರಾಯಣ,  ತಲಕಾಡಿನ ಕೀರ್ತಿ ನಾರಾಯಣ, ಕೆರೆ ತೊಣ್ಣೂರಿನ ನಂಬಿ ನಾರಾಯಣ ಹಾಗೂ ಮೇಲುಕೋಟೆಯ ಚೆಲುವ ನಾರಾಯಣ ಎಂದೂ ಹೇಳಲಾಗುತ್ತದೆ.

ಗುಂಡ್ಲುಪೇಟೆ ಊರಿನ ಮಧ್ಯದಲ್ಲಿ ಕೋಟೆಯ ಒಳಗಿರುವ ವಿಜಯ ನಾರಾಯಣ ದೇವಾಲಯ ಹೊಯ್ಸಳರ ದೇವಾಲಯವಾದರೂ ಇತರ ಹೊಯ್ಸಳ ದೇವಾಲಯದಂತೆ ಬಳಪದ ಕಲ್ಲಿನ ಕಟ್ಟಡವೂ ಅಲ್ಲ, ಇಲ್ಲಿ ಬೇಲೂರು, ಹಳೆ ಬೀಡಿನ ರೀತಿಯಲ್ಲಿ ಸೂಕ್ಷ್ಮ ಕೆತ್ತನೆಯ ಶಿಲ್ಪಗಳೂ ಇಲ್ಲ. ಕಡುಗಲ್ಲಿನಿಂದ ನಿರ್ಮಿಸಿರುವ ಈ ದೇವಾಲಯದ ಮುಂಭಾಗ ವಿಜಯನಗರ ಕಾಲದ ಶೈಲಿಯ ಮಂಟಪವಾಗಿದೆ, ಇದರಲ್ಲಿ ಸಿಂಹ, ಶಾರ್ದೂಲ, ವ್ಯಾಳದ ಸುಂದರ ಶಿಲ್ಪಗಳಿವೆ. ಕಲ್ಲಿನ ಕಂಬಗಳಲ್ಲಿ ಹಂಸ, ಕುದುರೆ ಸವಾರ ಹಾಗೂ ಹಲವು ದೇವತೆಗಳ ಉಬ್ಬುಶಿಲ್ಪಗಳೂ ಇವೆ.

ಶತಮಾನದಿಂದ 15ನೇ ಶತಮಾನದವರೆಗೆ ವಿವಿಧ ಹಂತದಲ್ಲಿ ಈ ದೇವಾಲಯ ಅಭಿವೃದ್ಧಿಹೊಂದಿದೆ ಎಂದು ಇತಿಹಾಸಜ್ಞರು ಹೇಳುತ್ತಾರೆ. ಕಣಶಿಲೆಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ತಳವಿನ್ಯಾಸದಲ್ಲಿ ಗರ್ಭಗೃಹ, ಶುಕನಾಸಿ, ನವರಂಗ ಮತ್ತು ಮುಖಮಂಟಪಗಳನ್ನು ಒಳಗೊಂಡಿದೆ. ನವರಂಗದ ಭಾಗದ ಅಧಿಷ್ಠಾನದಲ್ಲಿ ಪಾದ, ಅಧೋಕುಮುದ, ತ್ರಿಪಟ್ಟ ಕುಮುದ ಮತ್ತು ಪಟ್ಟಿಕೆಗಳಿವೆ. ಭಿತ್ತಿಗಳನ್ನು ಭಿತ್ತಿ ಪಾದಗಳಿಂದ ಅಲಂಕರಿಸಲಾಗಿದೆ.

ಪ್ರಸ್ತಾರದಲ್ಲಿ ಕೂಡುಗಳಿಂದ ಅಲಂಕೃತವಾದ ಕಪೋತವಿದೆ. ಕೂಡುಗಳಲ್ಲಿ ಗಂದರ್ವ ಮುಖಗಳನ್ನು ಕೆತ್ತಲಾಗಿದೆ. ಹಿಂದೆ ಇಲ್ಲಿದ್ದ ಮುಖ ಮಂಟಪ ಈಗ ಮುಚ್ಚಿಹೋಗಿದೆ. ಮಂಟಪಗಳು ಕೋಷ್ಠಾಲಂಕೃತವಾದ ಪ್ರಸ್ತಾರಗಳನ್ನು ಹೊಂದಿವೆ. ಪ್ರತಿಯೊಂದು ಕೋಷ್ಠಕದಲ್ಲೂ ಗಾರೆಗಚ್ಚಿನ ಶಿಲ್ಪಗಳಿವೆ. ಎಲ್ಲ ಕೋಷ್ಠಕಗಳಿಗೂ ಪ್ರಧಾನ ಕೀರ್ತಿಮುಖದ ಮಹಾನಾಸಿಗಳಿವೆ.

ಪ್ರಧಾನ ಗರ್ಭಗೃಹದ ಮೇಲೆ ಗೋಪುರವಿದೆ. ಗರ್ಭಗುಡಿಯಲ್ಲಿ ಬೇಲೂರು ಚೆನ್ನಕೇಶವ ಮತ್ತು ತಲಕಾಡಿನ ಕೀರ್ತಿನಾರಾಯಣನಿಗಿಂತ ತುಸು ಚಿಕ್ಕದಾದ, ಶಂಖ, ಚಕ್ರ, ಗದಾಧಾರಿಯಾಗಿ ಹಾಗೂ ಅಭಯ ಮುದ್ರೆಯಲ್ಲಿರುವ ಸುಂದರ ಜನಾರ್ದನ ಮೂರ್ತಿಯಿದೆ. ಹಿಂದೆ ಈ ಊರು ವಿಜಯಪುರಿ ಎನಿಸಿಕೊಂಡಿದ್ದ ಕಾರಣ ಈ ದೇವರಿಗೆ ವಿಜಯನಾರಾಯಣ ಎಂಬ ಹೆಸರೂ ಬಂದಿದೆ ಎಂದು ಹೇಳಲಾಗುತ್ತದೆ.

ದೇವಾಲಯದಲ್ಲಿ ಈಗ ಊರಿನಲ್ಲಿ ಶಿಥಿಲವಾಗಿದ್ದ ಪರವಾಸುದೇವನ ಮೂರ್ತಿಯನ್ನು ತಂದು ಇಡಲಾಗಿದೆ. ಜೊತೆಗೆ ಆಳ್ವಾರರ ಮೂರ್ತಿಗಳೂ ಇವೆ.

ರಥಸಪ್ತಮಿಯ ಅಂಗವಾಗಿ ವಿಜಯನಾರಾಯಣ ಸ್ವಾಮಿಗೆ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಜರುಗುತ್ತದೆ.

ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾದ ಗುಂಡ್ಲುಪೇಟೆಗೆ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಪ್ರಮುಖ ಸ್ಥಳದಿಂದ ನೇರ ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ ಗುಂಡ್ಲುಪೇಟೆಗೆ 211 ಕಿ.ಮೀ., ಮೈಸೂರಿನಿಂದ ಗುಂಡ್ಲುಪೇಟೆಗೆ 59 ಕಿ.ಮೀ., ನಂಜನಗೂಡಿನಿಂದ ಗುಂಡ್ಲುಪೇಟೆಗೆ 39 ಕಿ.ಮೀ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 15 ಕಿ.ಮೀ. ಮಾತ್ರ.

ಗುಂಡ್ಲುಪೇಟೆಗೆ ಬರುವವರು ಸನಿಹದಲ್ಲೇ ಇರುವ ನಂಜನಗೂಡು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಾಥಸ್ವಾಮಿ, ಮಲೆ ಮಹದೇಶ್ವರ ದೇವಾಲಯಕ್ಕೂ ಹೋಗಿ ಬರಬಹುದು.