ಮನೆ ರಾಜ್ಯ ವಿಜಯಪುರ ಗೋದಾಮು ದುರಂತ:  ಮೂಟೆಯಡಿ ಸಿಲುಕಿದ್ದ 6 ಕಾರ್ಮಿಕರ ಶವ ಪತ್ತೆ

ವಿಜಯಪುರ ಗೋದಾಮು ದುರಂತ:  ಮೂಟೆಯಡಿ ಸಿಲುಕಿದ್ದ 6 ಕಾರ್ಮಿಕರ ಶವ ಪತ್ತೆ

0

ವಿಜಯಪುರ: ವಿಜಯಪುರ ನಗರದ ಬೃಹತ್​ ಆಹಾರ ಶೇಖರಣಾ ಗೋದಾಮಿನಲ್ಲಿ ಸಂಭವಿಸಿದ ದುರಂತದಲ್ಲಿ 7ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಆರು ಕಾರ್ಮಿಕರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಮೃತರನ್ನು ರಾಜೇಶ್ ಮುಖಿಯಾ (25), ರಾಮಬ್ರೀಜ್ ಮುಖಿಯಾ (29), ಶಂಭು ಮುಖಿಯಾ (26), ಲುಖೋ ಜಾಧವ್ (45) ಮತ್ತು ರಾಮ್ ಬಾಲಕ್ (52) ಎಂದು ಗುರುತಿಸಲಾಗಿದೆ.

ಇನ್ನೊಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿದ್ದು, ಗುರುತು ಪತ್ತೆ ಹಚ್ಚಲಾಗುತ್ತಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಕೊನೆಯ ಹಂತಕ್ಕೆ ತಲುಪಿದ್ದು, ಇನ್ನೊಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಬೇಕಿದೆ.

ರಾಜಗುರು ಇಂಡಸ್ಟ್ರೀಸ್​ ಗೋದಾಮು ಇದಾಗಿದ್ದು, ಫುಡ್ ಪ್ರೊಸೆಸಿಂಗ್ ಯುನಿಟ್​​ನಲ್ಲಿ ಕೆಲಸ ಮಾಡುತ್ತಿದ್ದಾಗ ಮೆಕ್ಕೆಜೋಳದ ಚೀಲಗಳು ಸುಮಾರು 11 ಕಾರ್ಮಿಕರ ಮೇಲೆ ಕುಸಿದಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನಾ ಸಂದರ್ಭದಲ್ಲಿ ಮೂವರು ಬಚಾವ್ ಆಗಿದ್ದರು. ಮೆಕ್ಕೆಜೋಳದ ಚೀಲಗಳ ಅಡಿ ಕಾರ್ಮಿಕರು ಸಿಲುಕಿದ್ದರಿಂದ ಉಸಿರಾಡಲು ಸಾಧ್ಯವಾಗದೇ ಕಾರ್ಮಿಕರು ಸಾವನ್ನಪ್ಪಿದ್ದಾರೆ.

SDRF ತಂಡದಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಮೆಕ್ಕೆಜೋಳದ ಅಡಿ ಸಿಲುಕಿದವರು ಬಿಹಾರ ಮೂಲದ ಕಾರ್ಮಿಕರೆಂದು ತಿಳಿದು ಬಂದಿದ್ದು, ನಾಲ್ಕೈದು ಜೆಸಿಬಿಗಳಿಂದ ನಿರಂತರ ಕಾರ್ಯಾಚರಣೆ ನಡೆಸಲಾಗ್ತಿದೆ.

ಗೋದಾಮಿಗೆ ಸಚಿವ ಎಂಬಿ ಪಾಟೀಲ ಭೇಟಿ:

ಸಚಿವ ಎಂಬಿ ಪಾಟೀಲ ಅವರು ವಿಜಯಪುರ ನಗರದ ಹೊರವಲಯದ ಕೈಗಾರಿಕೆ ಪ್ರದೇಶದಲ್ಲಿ ಕಾರ್ಮಿಕರು ಸಿಲುಕಿಕೊಂಡಿರುವ ರಾಜಗುರು ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯ ಪರಿಶೀಲನೆ ನಡೆಸಿದರು.

ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನದಲ್ಲಿದ್ದ ಸಚಿವರು ಸುದ್ದಿ ತಿಳಿಯುತ್ತಿದ್ದಂತೆ ನಗರಕ್ಕೆ ದೌಡಾಯಿಸಿ ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ, ಕಾರ್ಮಿಕರನ್ನು ಭೇಟಿ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಭೀಕರ ದುರಂತ ಘಟನೆ ನಡೆದಿದೆ. ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿರುವಾಗ ಅನಾಹುತ ಸಂಭವಿಸಿದೆ. ಈಗಲೂ ನಮ್ಮ ಪ್ರಥಮ ಆದ್ಯತೆ ಕಾರ್ಮಿಕರ ರಕ್ಷಣೆ ಆಗಿದೆ. ಕಾರ್ಮಿಕರ ಮೃತದೇಹಗಳನ್ನು ಅವರ ಮನೆಗಳಿಗೆ ತಲುಪಿಸುವಂತಹ ಕಾರ್ಯ ಮಾಡಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ, ಮಾಹಿತಿ ಪಡೆದಿದ್ದೇನೆ. ಮುಖ್ಯಮಂತ್ರಿಗಳಿಗೂ ಸಹ ಈ ಕುರಿತು ಮಾಹಿತಿ ನೀಡಿದ್ದೇನೆ. ಗಾಯಳುಗಳಿಗೆ ಸಿಎಂ ಜೊತೆ ಮಾತನಾಡಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

ಮೃತ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದ ಸಚಿವರು, ಮಾಲೀಕರು ಕೂಡ ಅವರ ಕೆಲಸಗಾರರಿಗೆ ಪರಿಹಾರ ಕೊಡಬೇಕು. ಗೋದಾಮಿನ ಮಾಲೀಕರಿಂದಲೂ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ. 7 ಕಾರ್ಮಿಕರು ಸಾವನ್ನಪ್ಪಿರಬಹುದು. ಸಂಪೂರ್ಣ ಕಾರ್ಯಾಚರಣೆ ಮುಗಿದ ನಂತರ ಎಲ್ಲ ಮಾಹಿತಿ ದೊರೆಯಲಿದೆ. ಕಾರ್ಮಿಕರು ಮತ್ತು ಮೃತರ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಈ ಹಿಂದೆ ಇದೇ ರೀತಿ ಇಬ್ಬರು ಕಾರ್ಮಿಕರ ಸಾವು ಆದಾಗ ಮಾಲೀಕರು ಪರಿಹಾರ ಮತ್ತು ಮೃತರ ದೇಹ ಕೂಡ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿವೆ. ಅದನ್ನು ತನಿಖೆ ನಡೆಸುತ್ತೇವೆ. ತಪ್ಪಾಗಿದ್ದಲ್ಲಿ ಕ್ರಮ ಜರುಗಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಈ ಹಿಂದೆ ಇಬ್ಬರು ಕಾರ್ಮಿಕರು ಸಾವಾಗಿದ್ದಾಗ ಪರಿಹಾರದ ಜೊತೆಗೆ ಮೃತದೇಹ ಕೊಟ್ಟಿಲ್ಲ ಅಂತ ಆರೋಪಿಸಿ ಪ್ರತಿಭಟನೆ ಕೈಗೊಂಡಿದ್ದ ಬಿಹಾರ ಕಾರ್ಮಿಕರನ್ನು ಇದೇ ವೇಳೆ, ಸಚಿವರು ಮನವೊಲಿಸಿದರು.

ಹಿಂದಿನ ಲೇಖನಬಹುತ್ವವೇ ಭಾರತದ ಶಕ್ತಿ-ಸಂವಿಧಾನವೇ ಬಹುತ್ವದ ಶಕ್ತಿ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ: ಮಾಹಿತಿ ನೀಡಿದವರಿಗೆ 50 ಸಾವಿರ ನಗದು ಬಹುಮಾನ