ವಿಜಯಪುರ: ಚಲಿಸುವ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಾರಿಗೆ ಆವರಿಸಿ ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜರುಗಿದೆ.
ಕಲಬುರಗಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿಲ್ಲೆಯ ಸಿಂದಗಿ ರಸ್ತೆಯಲ್ಲಿರುವ ಹೊನ್ನುಟಗಿ ಗ್ರಾಮದ ಬಳಿ ಈ ಘಟನೆ ಜರುಗಿದೆ.
ಕಾರು ಚಲಿಸುವಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಕಾರಿನ ಚಾಲಕ ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದಾನೆ. ಇದರಿಂದಾಗಿ ಸಂಭವನೀಯ ಅನಾಹುತ ತಪ್ಪಿದೆ.
ವಿಷಯ ತಿಳಿಯುತ್ತಲೇ ಅಗ್ನಿಶಾಮಕ ಸೇವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡ ಕಾರಣ ಬಿರು ಬಿಸಿಲಿನಲ್ಲಿ ಈ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳ ಚಾಲಕರು ತಮ್ಮ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಭೀತಿಯಿಂದ ವಾಹನಗಳನ್ನು ಇಕ್ಕೆಲಗಳಲ್ಲಿ ನಿಲ್ಲಿಸಿದ್ದರಿಂದ ಸಂಚಾರ ಕೆಲ ಕಾಲ ಸ್ಥಗಿತವಾಗಿತ್ತು.
ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Saval TV on YouTube