ವಿಜಯಪುರ: ನಗರದ ಕೋರ್ಟ್ ಆವರಣದಲ್ಲೇ ವ್ಯಕ್ತಿಯೋರ್ವ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡ ಘಟನೆ ಶುಕ್ರವಾರ ನಡೆದಿದೆ.
ರಾಜು ಶಿವಾನಂದ ಹೊಸಮನಿ ಎಂಬಾತನೇ ಕತ್ತು ಕೊಯ್ದುಕೊಂಡ ಆರೋಪಿಯಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರಾಜು ಮೇಲೆ ನ್ಯಾಯಾಲಯದ ವಾರೆಂಟ್ ಸಹ ಇತ್ತು. ಶುಕ್ರವಾರ ನಗರದ ಕೆಇಬಿ ಬಳಿ ಈತನನ್ನು ಬಂಧಿಸಿದ ಪೊಲೀಸರು ಬಳಿಕ ನೇರವಾಗಿ ನ್ಯಾಯಾಧೀಶರ ಎದುರು ಹಾಜರು ಪಡಿಸಲು ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದಿದ್ದರು. ಈ ವೇಳೆ, ತನ್ನ ಬಳಿಯಿದ್ದ ಬ್ಲೇಡ್ ನಿಂದ ಏಕಾಏಕಿ ಕತ್ತು ಕೊಯ್ದುಕೊಂಡಿದ್ದಾನೆ ಎಂದು ಜಲನಗರ ಪೊಲೀಸರು ತಿಳಿಸಿದ್ದಾರೆ.
ತತ್ ಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಂಧಿ ನಗರ, ಗೋಳಗುಮ್ಮಟ ಠಾಣಾ ವ್ಯಾಪ್ತಿಯ ಪ್ರಕರಣಗಳಲ್ಲಿ ಈ ಆರೋಪಿ ಬೇಕಾಗಿದ್ದ. ಕೋರ್ಟ್ ನಲ್ಲಿ ನಡೆದ ಈ ಘಟನೆ ಬಗ್ಗೆ ಜಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.














