ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 10 ಕಂಟ್ರಿ ಪಿಸ್ತೂಲ್, 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅರಕೇರಿ ತಾಂಡಾ ನಂ.1ರಲ್ಲಿ ಇತ್ತೀಚಿಗೆ ನಡೆದ ಸತೀಶ ರಾಠೋಡ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ಸಾಗರ @ ಸುರೇಶ ರಾಠೋಡ ಎಂಬಾತ ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್‌ಗಳನ್ನು ಅಕ್ರಮವಾಗಿ ತಂದು ಜಿಲ್ಲೆಯ ಹಲವು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಆತ ನೀಡಿದ ಮಾಹಿತಿ ಆಧರಿಸಿ ವಿವಿಧೆಡೆ ದಾಳಿ ನಡೆಸಿ ಕಂಟ್ರಿ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಹಲವು ವ್ಯಕ್ತಿಗಳಿಗೆ ಆರೋಪಿ ಸಾಗರ ಅಲಿಯಾಸ್ ಸುರೇಶ ರಾಠೋಡನು ₹50 ಸಾವಿರದಿಂದ ₹1 ಲಕ್ಷಕ್ಕೆ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡಿದ್ದನು ಎಂದು ತಿಳಿಸಿದರು.
ಸಾಗರ ರಾಠೋಡನಿಂದ ಅಕ್ರಮವಾಗಿ ಪಿಸ್ತೂಲ್ ಪಡೆದುಕೊಂಡಿದ್ದ ವಿಜಯಪುರ ಜಿಲ್ಲೆಯ ಹಂಚಿನಾಳ ತಾಂಡದ ಪ್ರಕಾಶ ರಾಠೋಡ, ಕರಾಡ ದೊಡ್ಡಿಯ ಅಶೋಕ ಪಾಂಡ್ರೆ, ಮಹಾರಾಷ್ಟ್ರದ ತುಳಜಾಪುರ ಸಮೀಪದ ಕಡಕಿ ತಾಂಡಾದ ಸುಜಿತ ರಾಠೋಡ, ವಿಜಯಪುರ ಸಾಯಿ ಪಾರ್ಕ್ ನ ಸುಖದೇವ ಅಲಿಯಾಸ್ ಸುಖಿ ರಾಠೋಡ, ಸಿಂದಗಿ ತಾಲ್ಲೂಕಿನ ನಾಗಾವಿ ತಾಂಡಾದ ಪ್ರಕಾಶ ರಾಠೋಡ, ಬಸವನ ಬಾಗೇವಾಡಿಯ ಹೋಟೆಲ್ ಮಾಲೀಕ ಗಣೇಶ ಶಿವರಾಮ ಶೆಟ್ಟಿ, ಹುಬ್ಬಳ್ಳಿ ತಾಲ್ಲೂಕು ನೂಲ್ವಿಯ ಚನ್ನಪ್ಪ ನಾಗನೂರ, ತಿಕೋಟಾ ತಾಲ್ಲೂಕಿನ ಲೋಹಗಾಂವ ತಾಂಡದ ಸಂತೋಷ ರಾಠೋಡ, ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಐತವಾಡೆಯ ಜನಾರ್ದನ ಪವಾರ ಅವರ ಮೇಲೆ ದಾಳಿ ನಡೆಸಿ ಕಂಟ್ರಿ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿಎಸ್ ಪಿ ಗಿರಿಮಲ್ಲ ತಳಕಟ್ಟಿ, ಬಸವರಾಜ ಯಲಿಗಾರ, ಜಗದೀಶ ಎಚ್.ಎಸ್., ಬಲ್ಲಪ್ಪ ನಂದಗಾವಿ, ಸಿಪಿಐ ರಾಯಗೊಂಡ ಜಾನರ, ಮಲ್ಲಯ್ಯ ಮಠಪತಿ, ನಾನಾಗೌಡ ಪಾಟೀಲ, ಗುರುಶಾಂತ ದಾಶ್ಯಾಳ, ಪರಶುರಾಮ ಮನಗೂಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.