ವಿಜಯಪುರ: ನಗರದ ಸೊಲ್ಲಾಪುರ ಬ್ರಿಡ್ಜ್ ಬಳಿ ಗಾಂಜಾ ಹಾಗೂ ಮಾದಕ ಪದಾರ್ಥಗಳನ್ನು ಬೈಕ್ ಗಳ ಮೇಲೆ ತಂದಿಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ ಗ್ಯಾಂಗ್ ನ್ನು ಆದರ್ಶ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಈ ಪೈಕಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಅವರಿಂದ ಒಟ್ಟು 7.50 ಕೆಜಿ ಒಣ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ನಗರದ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ರಾಠೋಡ್, ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿ ಸಾಯಿಹೇಮಂತ ತಾಟಿ ಇವರಿಗೆ ಸಹಾಯ ಮಾಡಿದ ಅಭಿಮನ್ಯು ಚವ್ಹಾಣ ಹಾಗೂ ಅವಿನಾಶ ಮೇತ್ರಿ ಎಂದು ಗುರುತಿಸಲಾಗಿದೆ.
ಇದರಲ್ಲಿ ಅಭಿಮನ್ಯು ಚವ್ಹಾಣ ಮಧ್ಯಪ್ರದೇಶದ ಮೂಲಕ ಗಾಂಜಾ ತಂದು ಸಹಾಯಕ ಉಪನ್ಯಾಸಕ ಪ್ರಕಾಶ ರಾಠೋಡ್ಗೆ ನೀಡುತ್ತಿದ್ದ. ಬಳಿಕ ಅದನ್ನು ಸಹಾಯಕ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸೇರಿ ಇತರರು ಕೂಡಿಟ್ಟು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಗಾಂಜಾ ಎಲ್ಲಿಂದ ಬಂತು, ಹೇಗೆ ಬಂತು? ಯಾರಿಗೆ ಕೊಡುತ್ತಿದ್ದರು , ಎಲ್ಲಿ ಹಾಗೂ ಯಾರ್ಯಾರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬುದರ ಕುರಿತು ತನಿಖೆ ನಡೆಸೋದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಕಾನೂನು ಬಾಹಿರವಾಗಿ ಗಾಂಜಾ ಸಂಗ್ರಹ ಮಾಡಿಕೊಂಡ ಜಾಲದ ಪೈಕಿ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾದ್ಯಾಪಕ ಹಾಗೂ ಓರ್ವ ವಿದ್ಯಾರ್ಥಿ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದು, ಶ್ಲಾಘನೀಯವೆಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.