ವಿಜಯಪುರ: ಹಾಡಹಗಲೇ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆ ಮಾಡಿದ ಘಟನೆ ಮಂಗಳವಾರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಬಳಿ ನಡೆದಿದೆ.
ಘಟನೆಯಲ್ಲಿ ಸತೀಶ ರಾಠೋಡ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಮೇಶ ಚೌವ್ಹಾಣ್ ಹಾಗೂ ಇತರರಿಂದ ಕೃತ್ಯ ನಡೆದಿರುವ ಆರೋಪ ಕೇಳಿಬಂದಿದೆ. ಸತೀಶ್ ಮೇಲೆ ದಾಳಿ ಮಾಡಿದ ಸ್ಥಳದಲ್ಲಿ ಒಂದು ಕಿವಿ ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಗೆ ಯುವತಿಯೊಂದಿಗಿನ ಮದುವೆ ವಿಚಾರವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ರಮೇಶ ಚೌವ್ಹಾಣ್ ಪುತ್ರಿಯನ್ನು ಸತೀಶ್ ಜೊತೆ ಮದುವೆ ಮಾಡಲು ಗುರು-ಹಿರಿಯರ ಸಮ್ಮುಖದಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇದಕ್ಕೆ ರಮೇಶ ಒಪ್ಪಿರಲಿಲ್ಲ. ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶನ ಮಗಳು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಳು. ಇದಕ್ಕೆ ಕಾರಣ ಸತೀಶ್ ಎಂಬ ಸಿಟ್ಟು ರಮೇಶ ಹಾಗೂ ಸಹಚರರಿಗೆ ಇತ್ತು. ಅದೇ ಕೋಪದಲ್ಲಿ ಸತೀಶನಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಮೃತನ ತಂದೆ ಪ್ರೇಮ್ ಸಿಂಗ್ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ. ಎಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಸತೀಶ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.














