ಬೆಂಗಳೂರು(Bengaluru): ಜ 21 ರಿಂದ 29 ರವರೆಗೆ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನವನ್ನು ಆರಂಭಿಸಲಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ 39 ಸಂಘಟನಾ ಜಿಲ್ಲೆಗಳು, 312 ಮಂಡಲಗಳಲ್ಲಿ ಈ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ 2 ಕೋಟಿ ಜನರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಅಲ್ಲದೇ ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರಗಳ ಸಭೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದಲ್ಲಿ ಜ.21 ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದರು.
ಈ ಅಭಿಯಾನದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳನ್ನು ಸಂಪರ್ಕಿಸಲಾಗುವುದು. ಸುಮಾರು 2 ಕೋಟಿಗೂ ಹೆಚ್ಚು ಫಲಾನುಭವಿಗಳು ಎಂದರೆ, 1 ಕೋಟಿ ಕುಟುಂಬಗಳನ್ನು ಸಂಪರ್ಕಿಸುವ ಗುರಿ ಹಮ್ಮಿಕೊಳ್ಳಲಾಗಿದೆ. ಜನ್’ಧನ್, ಪಿಎಂ ಕಿಸಾನ್, ಪಿಎಂ ಆವಾಸ್, ಉಜ್ವಲಾ, ರೈತ ವಿದ್ಯಾನಿಧಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಫಲಾನುಭವಿಗಳನ್ನು ಸಂರ್ಕಿಸುತ್ತೇವೆ ಎಂದರು.
ಅವರ ಮನೆಗಳ ಮೇಲೆ ಪಕ್ಷವನ್ನು ಬೆಂಬಲಿಸುವ ಉದ್ದೇಶದ ಸ್ಟಿಕರ್’ಗಳನ್ನು ಅಂಟಿಸಲಾಗುವುದು. ಇದಕ್ಕಾಗಿ 3 ಕೋಟಿ ಸ್ಟಿಕ್ಕರ್ ಹಂಚಲಾಗುವುದು. ಈ ಕಾರ್ಯಕ್ರಮ ಏಕ ಕಾಲದಲ್ಲಿ 58 ಸಾವಿರ ಬೂತ್‌ಗಳಲ್ಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇದೇ 29 ರಂದು ಪ್ರಧಾನಿ ಮೋದಿಯವರ ‘ಮನ್‌ಕಿ ಬಾತ್ ರೇಡಿಯೋ’ ಕಾರ್ಯಕ್ರಮವನ್ನು ಎಲ್ಲ ಬೂತ್‌ಗಳಲ್ಲಿ ಒಟ್ಟಿಗೇ ಕುಳಿತು ಆಲಿಸುವ ಕಾರ್ಯಕ್ರಮವೂ ಇದೆ. ಇದರೊಂದಿಗೆ ಅಭಿಯಾನವನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.