ಕೆ.ಆರ್.ಪೇಟೆ (K.R.Pette)-ಹೆಜ್ಜೇನು ದಾಳಿಗೆ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿ ಮಾದಾಪುರ ವೃತ್ತದ ಅಂಬಿಗರಹಳ್ಳಿ ಗ್ರಾಮದ ಗ್ರಾಮ ಸಹಾಯಕ ಬ್ರಹ್ಮರಾಜು ಮೃತಪಟ್ಟಿದ್ದಾರೆ.
ಮೇ 28 ರಂದು ಶನಿವಾರ ತಹಶೀಲ್ದಾರ್ ಆದೇಶದ ಮೇರೆಗೆ ಗ್ರಾಮ ಸಹಾಯಕರು ತಾಲೂಕು ಕಚೇರಿಯನ್ನು ಸ್ವಚ್ಛಗೊಳಿಸುವಾಗ ಈ ದುರ್ಘಟನೆ ನಡೆದಿದೆ. ಕಚೇರಿಯ ಮಹಡಿಯಲ್ಲಿ ಹೆಜ್ಜೇನು ಗೂಡು ಕಟ್ಟಿರುವುದಾಗಿ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಅದನ್ನು ತೆರವು ಮಾಡುವಂತೆ ಸೂಚಿಸಿದ ಕಾರಣ ಬ್ರಹ್ಮರಾಜು ಮತ್ತಿತರು ಹೆಜ್ಜೇನು ಗೂಡಿಗೆ ಕೈ ಹಾಕಿದಾಗ ಜೇನು ದಾಳಿ ನಡೆಸಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬ್ರಹ್ಮರಾಜು ಮೃತಪಟ್ಟಿದ್ದಾರೆ. ಜೇನು ಕಡಿತದಿಂದ ಗಾಯಗೊಂಡ ಹಲವು ಗ್ರಾಮ ಸಹಾಯಕರು ಚೇತರಿಸಿಕೊಳ್ಳುತ್ತಿದ್ದಾರೆ.
ಜೇನುಗೂಡು ಇದ್ದರೂ ಗ್ರಾಮ ಸಹಾಯಕರಿಗೆ ಅದನ್ನು ತೆರವುಗೊಳಿಸಲು ಒತ್ತಡ ಹೇರಿದ್ದು ಅಧಿಕಾರಿಗಳ ತಪ್ಪು. 43 ವರ್ಷದಿಂದ 12 ಸಾವಿರ ಗೌರವ ಧನಕ್ಕೆ ಸಾವಿರಾರು ಗ್ರಾಮ ಸಹಾಯಕರು ದಿನದ 24 ಗಂಟೆಗಳ ಕಾಲ ಯಾವುದೇ ಉದ್ಯೋಗ ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ. ಮೃತ ಗ್ರಾಮ ಸಹಾಯಕನ ಕುಟುಂಬಕ್ಕೆ ಸರ್ಕಾರ ಮತ್ತು ತಾಲೂಕು ಆಡಳಿತ ನೆರವು ನೀಡಬೇಕು ಜತೆಗೆ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಗ್ರಾಮ ಸಹಾಯಕರ ಸಂಘದ ರಾಜ್ಯ ಖಜಾಂಚಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.














