ಯಳಂದೂರು: ಇವು ತಾಲೂಕಿನ ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಇಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಶಿಕ್ಷಕ ಜಿ. ಮಹದೇವ ರವರಿಗೆ ಸಿಕ್ಕ ಆತ್ಮೀಯವಾಗಿ ಬೀಳ್ಕೂಡಲಾಯಿತು.
೧೯೯೪ ರಂದು ಇದೇ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆಗೆ ಸೇರಿದ ಇವರು ಇದೊಂದೇ ಶಾಲೆಯಲ್ಲಿ ಬರೊಬ್ಬರೀ ೩೧ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸೋಮವಾರ ವಯೋನಿವೃತ್ತಿ ಹೊಂದುತ್ತಿರುವ ಇವರಿಗೆ ಗ್ರಾಮಸ್ಥರೆಲ್ಲಾ ಸೇರಿಕೊಂಡು ತಮ್ಮ ಗ್ರಾಮದಲ್ಲಿ ಮಂಗಳವಾದ್ಯ ಡೊಳ್ಳುಗಳೊಂದಿಗೆ ಶಾಲೆಯ ತನಕ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಇವರಿಗೆ ಚಿನ್ನದುಂಗುರವನ್ನು ತೊಡಿಸಿದ್ದಾರೆ. ಹಳೆ ವಿದ್ಯಾರ್ಥಿಗಳೂ ಸೇರಿ ಮತ್ತೊಂದು ಚಿನ್ನದುಂಗುರವನ್ನು ಇವರಿಗೆ ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ ಗ್ರಾಮದ ಮಕ್ಕಳ ಪೋಷಕರು ಸೇರಿದಂತೆ ನೂರಾರು ಮಂದಿ ಇವರಿಗೆ ಹಾರ, ತುರಾಯಿ, ಪೇಟಗಳನ್ನು ತೊಡಿಸಿ ಉಡುಗೊರೆಗಳನ್ನು ನೀಡಿ ಅಭಿನಂದಿಸಿದ್ದಾರೆ. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ಇವರ ಆತ್ಮೀಯರೂ ಕೂಡ ಹಿಂದೆ ಬೀಳದೆ ಈ ಸಡಗರದಲ್ಲಿ ಭಾಗವಹಿಸಿದ್ದಾರೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಆತ್ಮೀಯರಿಗೆ ಮಹಾದೇವ ಹಬ್ಬದೂಟವನ್ನು ಹಾಕಿ ಉಣಬಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ. ಮಹಾದೇವ ಮಾತನಾಡಿ, ನಾನು ಈ ಶಾಲೆಯಲ್ಲೇ ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ಇಲ್ಲೇ ನಿವೃತ್ತಿಯಾಗುತ್ತಿದ್ದೇನೆ. ಒಂದೇ ಶಾಲೆಯಲ್ಲಿ ೩೧ ವರ್ಷ ಸೇವೆ ಸಲ್ಲಿಸುವ ಸುಯೋಗ ನನಗೆ ಒದಗಿದ್ದು ವಿಶೇಷ. ಈ ಗ್ರಾಮದವರು ನನಗೆ ಆತ್ಮೀಯರಾಗಿದ್ದಾರೆ. ನನ್ನ ಕುಟುಂಬವಾಗಿದ್ದಾರೆ. ಅಪಾರ ಪ್ರೀತಿಯನ್ನು ನೀಡಿದ್ದಾರೆ. ನನಗೆ ಜಿಲ್ಲಾ ಉತ್ತಮ ಶಿಕ್ಷಕ, ರಾಜ್ಯ ಮಟ್ಟದ ಮೂರು ಪ್ರಶಸ್ತಿಗಳು, ರಾಷ್ಟ್ರ ಮಟ್ಟದ ಕನ್ನಡ ಸಿರಿ ಸಾಧಕ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿರುವುದು ಈ ಶಾಲೆಯಿಂದಲೇ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ನನ್ನ ಮಡದಿ ಹಾಗೂ ನಾಲ್ವರು ಮಕ್ಕಳು ನನಗೆ ಬೆಂಬಲವಾಗಿ ನಿಂತಿದ್ದರು. ಇಡೀ ಗ್ರಾಮವೇ ನನಗೆ ಕುಟುಂಬವಾಗಿತ್ತು. ಉತ್ತಮ ಸಂಬಂಧ ಹೊಂದಿದ್ದು. ಈಗ ಈ ಗ್ರಾಮದವರು ತೋರಿಸುತ್ತಿರುವ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಗ್ರಾಮದೊಳಗೆ ನನಗೆ ವೇದಿಕೆ ಮಾಡಿ ಸನ್ಮಾನ ಮಾಡಿದ ಘಳಿಗೆ ನನಗೆ ಅಭೂತಪೂರ್ವ ಕ್ಷಣವಾಗಿದ್ದು ಒಬ್ಬ ಶಿಕ್ಷಕನಾಗಿ ನನ್ನ ಸೇವೆಗೆ ಸಲ್ಲಿದ ಸನ್ಮಾನ ಇದಾಗಿದೆ ಎಂದು ಭಾವುಕರಾದರು.
ಮುಖ್ಯ ಶಿಕ್ಷಕಿ ಯಶೋಧ, ಶಿಕ್ಷಕರಾದ ಸುರೇಶ್, ನಿರ್ಮಲ, ರಾಣಿ, ಸುಮನಾಗೇಂದ್ರ, ಉಮೇಶ್, ಮಂಜುಳಾ, ಮಮತಾ, ಉಮ್ಮೆಅಸ್ಮಾ ಮುಖಂಡರಾದ ರಂಗಸ್ವಾಮಿ, ರಂಗದಾಸಯ್ಯ, ಜಯಣ್ಣ, ಮಹದೇವಯ್ಯ, ಲಿಂಗರಾಜು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.















