ಮನೆ ರಾಷ್ಟ್ರೀಯ ಬರೇಲಿಯ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯಲ್ಲಿ ಹಿಂಸಾಚಾರ – ನದೀಮ್ ಅರೆಸ್ಟ್

ಬರೇಲಿಯ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯಲ್ಲಿ ಹಿಂಸಾಚಾರ – ನದೀಮ್ ಅರೆಸ್ಟ್

0

ಲಕ್ನೋ : ಉತ್ತರ ಪ್ರದೇಶದ ಬರೇಲಿಯಲ್ಲಿ ‘ಐ ಲವ್ ಮುಹಮ್ಮದ್’ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಮಾಸ್ಟರ್ ಮೈಂಡ್ ನದೀಮ್‌ನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಇತ್ತೇಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಜಾ ಖಾನ್ ಅವರ ಆಪ್ತ ಸಹಾಯಕನಾಗಿರುವ ನದೀಮ್ ಘಟನೆ ಬಳಿಕ ತಲೆಮರಿಸಿಕೊಂಡಿದ್ದ. ಸದ್ಯ ಆತನನ್ನು ಶಹಜಹಾನ್‌ಪುರದಿಂದ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ವಾಟ್ಸಾಪ್ ಗ್ರೂಪ್ ರಚಿಸಿ ನದೀಮ್ ಹಿಂಸೆಗೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ.

ಹಿಂಸಾಚಾರವನ್ನು ಪ್ರಚೋದನೆ ಮಾಡಿದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿರುವ 26 ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಮೌಲಾನಾ ತೌಕೀರ್ ರಜಾ ಸೇರಿದಂತೆ ಒಟ್ಟು 34 ಆರೋಪಿಗಳನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ 5, ಬರದಾರಿಯಲ್ಲಿ 2 ಮತ್ತು ಕಿಲಾ, ಕ್ಯಾಂಟ್ ಮತ್ತು ಪ್ರೇಮ್‌ನಗರ ಪೊಲೀಸ್ ಠಾಣೆಗಳಲ್ಲಿ ತಲಾ 1 ಎಫ್‌ಐಆರ್ ದಾಖಲಿಸಲಾಗಿದ್ದು, 125 ಜನರನ್ನು ಹೆಸರಿಸಲಾಗಿದ್ದು, ಜೊತೆಗೆ ಮೂರು ಸಾವಿರ ಅಪರಿಚಿತರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ.

ಬಂಧಿತ ಆರೋಪಿಗಳು ನ್ಯಾಯಧೀಶರ ಮುಂದೆ ಕ್ಷಮೆಯಾಚಿಸಿದ್ದು, ಆರೋಪಿಗಳಲ್ಲಿ ಹೆಚ್ಚಿನವರು ಯುವಕರು. ಗಲಭೆಗೆ ಕಾರಣವೇನೆಂದು ಕೇಳಿದಾಗ, ಅವರು ದಾರಿ ತಪ್ಪಿದ್ದಾರೆ ಮತ್ತು ಮತ್ತೆಂದೂ ಹಾಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿ ನಿಷೇಧಾಜ್ಞೆ ಹೊರತಾಗಿಯೂ, ಏಳು ಪೊಲೀಸ್ ಠಾಣೆ ಪ್ರದೇಶಗಳ ಐದು ಕೌನ್ಸಿಲರ್‌ಗಳು ಸೇರಿದಂತೆ 77 ಜನರು, ಖಲೀಲ್ ಶಾಲಾ ಮುಂದೆ ಜನಸಮೂಹವನ್ನು ನಿರ್ದೇಶಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಒಬ್ಬ ಕೌನ್ಸಿಲರ್‌ನನ್ನು ಬಂಧಿಸಲಾಗಿದ್ದು, ನಾಲ್ವರು ಕೌನ್ಸಿಲರ್‌ಗಳು ಸೇರಿದಂತೆ 76 ಜನರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.