ಟೆಹ್ರಾನ್ : ಇರಾನ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ 13 ದಿನಕ್ಕೆ ಕಾಲಿಟ್ಟಿದ್ದು, ಹಿಂಸಾಚಾರ ಮತ್ತಷ್ಟು ಹೆಚ್ಚಿದೆ. ಸರ್ಕಾರದ ಸೂಚನೆ ಮೇರೆಗೆ ಭದ್ರತಾಪಡೆಗಳು ಹಲವು ಸ್ಥಳಗಳಲ್ಲಿ ಗುಂಡು ಹಾರಿಸಿದ್ದು, 200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ವೈದ್ಯರ ಮಾಹಿತಿ ಪ್ರಕಾರ, ರಾಜಧಾನಿ ಟೆಹ್ರಾನ್ ನಲ್ಲಿರುವ 6 ಆಸ್ಪತ್ರೆಗಳಲ್ಲಿ ಕನಿಷ್ಠ 217 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಈ ಪೈಕಿ ಹೆಚ್ಚಿನವರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದುಬಂದಿದೆ. ಅಲ್ಲದೇ ಉತ್ತರ ಟೆಹ್ರಾನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವ ಸಮೂಹದ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದು, 30 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಖಮೇನಿ ಸರ್ಕಾರದ ವಿರುದ್ಧ 2025ರ ಡಿ.28 ರಂದು ಶುರುವಾದ ಪ್ರತಿಭಟಗಳು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ದೇಶಾದ್ಯಂತ ಇಂಟರ್‌ನೆಟ್ ಮತ್ತು ಫೋನ್ ಸಂಪರ್ಕಗಳನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇರಾನ್‌ನಿಂದ ಗಡಿಪಾರು ಆಗಿರುವ ಯುವರಾಜ ರೇಜಾ ಪಹ್ಲವಿ ಅವರು ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ತಡರಾತ್ರಿ ಟೆಹರಾನ್ ಮತ್ತು ಇತರ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಖಮೇನಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಮುಲ್ಲಾಗಳೇ ದೇಶಬಿಟ್ಟು ತೊಲಗಿ ಎಂದು ಜನರು ಘೋಷಣೆ ಕೂಗಿ ಟೆಹರಾನ್‌ನಲ್ಲಿರುವ ಸರ್ಕಾರಿ ಕಚೇರಿಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ 47 ವರ್ಷಗಳ ಇತಿಹಾಸದಲ್ಲಿ ಅತಿ ದೊಡ್ಡ ಆಡಳಿತ ವಿರೋಧಿ ಪ್ರತಿಭಟನೆ ಇದಾಗಿದೆ.
ವೈದ್ಯರು ಹೇಳಿಕೆ ನೀಡಿರುವುದಕ್ಕಿಂತ ಕಡಿಮೆ ಸಾವು ನೋವು ಇರಾನ್‌ನಲ್ಲಿ ಆಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ವರದಿ ಮಾಡಿವೆ. ಈ ವರದಿ ಪ್ರಕಾರ, 63 ಜನ ಸತ್ತಿದ್ದಾರೆ. ವಿದೇಶಿ ಸುದ್ದಿ ಸಂಸ್ಥೆಗಳ ಮೇಲಿನ ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ, ಸಾವಿನ ವರದಿಗಳು ಬದಲಾಗುತ್ತಿವೆ. ಈ ಮಧ್ಯೆ ಸಾವು-ನೋವಿನ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲ್ ಖಮೇನಿ, ಇಸ್ಲಾಮಿಕ್ ಗಣರಾಜ್ಯವು ದಂಗೆಕೋರರಿಗೆ ತಲೆಬಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.














