ಮನೆ ಕ್ರೀಡೆ ದುಃಖಭರಿತ ಮನಸ್ಸಿನಲ್ಲಿ ಬೆಂಗಳೂರು ತೊರೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ

ದುಃಖಭರಿತ ಮನಸ್ಸಿನಲ್ಲಿ ಬೆಂಗಳೂರು ತೊರೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ

0

ಬೆಂಗಳೂರು: 17 ವರ್ಷಗಳ ನಿರೀಕ್ಷೆಗೆ ತೆರೆ ಎಳೆದಿದ್ದಂತೆ, ಐಪಿಎಲ್ 2025ರಲ್ಲಿ ಪ್ರಥಮ ಬಾರಿಗೆ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮ 17 ಗಂಟೆಗಳೂ ಇರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತ ಆರ್‌ಸಿಬಿ ತಂಡದ ಸದಸ್ಯರು ಮತ್ತು ಲಕ್ಷಾಂತರ ಅಭಿಮಾನಿಗಳನ್ನು ನೋವಿನ ಸಾಗರದಲ್ಲಿ ಮುಳುಗಿಸಿದೆ.

ವಿಜಯದ ಸಂಭ್ರಮಕ್ಕಿಂತಲೂ ಮೊದಲು, 11 ನಿರಪರಾಧ ಅಭಿಮಾನಿಗಳ ಸಾವಿನ ಸುದ್ದಿ ಮಿಂಚಿನಂತೆ ಹರಡಿದಾಗ, ಆಟಗಾರರು ತೀವ್ರ ದುಃಖದಲ್ಲಿದ್ದರು. ತಕ್ಷಣವೇ, ಆರ್‌ಸಿಬಿ ತಂಡವು ಕೇವಲ 15 ನಿಮಿಷಗಳ ಕಾರ್ಯಕ್ರಮವನ್ನು ನೆರವೇರಿಸಿ, ಮೌನವಾಗಿ ವೇದಿಕೆಯಿಂದ ಹೊರನಡೆದಿತು. ಈ ದುರ್ಘಟನೆ ಆರ್‌ಸಿಬಿಗೆ ಮಾತ್ರವಲ್ಲ, ಇಡೀ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ಬೇಸರ ತಂದಿತು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಕೂಡ ಭಾರದ ಮನಸ್ಸಿನಲ್ಲಿ ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದಾರೆ. ಇವರಿಬ್ಬರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ, ಈ ದುರಂತದ ಬಗ್ಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ನನಗೆ ಹೇಳಲು ಪದಗಳಿಲ್ಲ. ಈ ಘಟನೆ ಬೇಸರ ತರಿಸಿದೆ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್ 2025 ರಲ್ಲಿ ಕೊಹ್ಲಿಯ ಪ್ರದರ್ಶನ ಗಮನಾರ್ಹವಾಗಿತ್ತು. 15 ಪಂದ್ಯಗಳಲ್ಲಿ 54.75 ರನ್ ಸರಾಸರಿಯಲ್ಲಿ 657 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಈ ಅವಧಿಯಲ್ಲಿ ಅವರು 8 ಅರ್ಧಶತಕಗಳನ್ನು ಬಾರಿಸಿದ್ದರು. ಆರ್‌ಸಿಬಿಗೆ ಟ್ರೋಫಿ ತರುವಲ್ಲಿ ಕೊಹ್ಲಿಯ ಪಾತ್ರ ಬಹುಮುಖ್ಯವಾಗಿತ್ತು.

ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ವಿರಾಟ್ ಕೇವಲ ಆಟಗಾರನಲ್ಲ, “ಕರ್ನಾಟಕದ ದತ್ತು ಪುತ್ರ”. ಆದರೆ ಈ ಸಂಭ್ರಮದ ಹೊತ್ತಿನಲ್ಲಿ ಸಂಭವಿಸಿದ ದುರ್ಘಟನೆ, ಕೊಹ್ಲಿ ಹಾಗೂ ತಂಡದ ಇತರ ಸದಸ್ಯರು ದುಃಖದ ಭಾವನೆಗಳೊಂದಿಗೆ ನಗರ ತೊರೆದಿದ್ದಾರೆ.