ಮನೆ ಕ್ರೀಡೆ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಹೃದಯ ಸ್ಪರ್ಶಿ ಸಂದೇಶ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಹೃದಯ ಸ್ಪರ್ಶಿ ಸಂದೇಶ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ

0

ನವದೆಹಲಿ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲು ಅನುಭವಿಸಿದ ನಂತರ ಭಾರತದ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿ ಅವರು ಶುಕ್ರವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಟ್ವೀಟ್ ಮಾಡಿದ್ದು, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇದರ ನಂತರ ಟೀಂ ಇಂಡಿಯಾ ಮತ್ತು ಆಟಗಾರರು ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆಯೇ ವಿರಾಟ್‌ ಪೋಸ್ಟ್‌ ಹಾಕಿದ್ದಾರೆ.

ನಿರಾಶೆ ತುಂಬಿದ ಹೃದಯೊಂದಿಗೆ ಆಸ್ಟ್ರೇಲಿಯಾ ತೊರೆಯುತ್ತಿರುವುದಾಗಿ ಅವರು ಹೇಳಿದ್ದಾರೆ.

ಕನಸಗಳನ್ನು ಸಾಧಿಸಲಾಗದೆ, ನಿರಾಶೆಯ ಭಾವ ತುಂಬಿದ ಹೃದಯದೊಂದಿಗೆ ನಾವು ಆಸ್ಟ್ರೇಲಿಯಾವನ್ನು ತೊರೆಯುತ್ತಿದ್ದೇವೆ. ಆದರೆ, ಒಂದು ತಂಡವಾಗಿ ನಾವು ಹಲವು ಸ್ಮರಣೀಯ ಕ್ಷಣಗಳನ್ನು, ಭವಿಷ್ಯದಲ್ಲಿ ಮತ್ತಷ್ಟು ಉತ್ತಮಗೊಳ್ಳುವ ಗುರಿಯನ್ನು ಇಲ್ಲಿಂದ ಹೊತ್ತೊಯ್ಯಬಹುದು ಎಂದು ಅವರು ಮೊದಲ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಕ್ರೀಡಾಂಗಣಗಳಲ್ಲಿ ನಮ್ಮನ್ನು ಬೆಂಬಲಿಸಲು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ನಮ್ಮ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಈ ಜರ್ಸಿಯನ್ನು ಧರಿಸಲು ಮತ್ತು ನಮ್ಮ ದೇಶವನ್ನು ಪ್ರತಿನಿಧಿಸಲು ನಾನು ಯಾವಾಗಲೂ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 168 ರನ್ ಗಳಿಸಿತ್ತು. ಇದನ್ನು ಬೆನ್ನುಹತ್ತಿದ ಇಂಗ್ಲೆಂಡ್‌ ಒಂದೇ ಒಂದು ವಿಕೆಟ್‌ ನಷ್ಟವಿಲ್ಲದೆ 16 ಓವರ್‌ಗಳಲ್ಲೇ 170 ಗಳಿಸಿ ಗುರಿ ತಲುಪಿತು.