ಮನೆ ಕ್ರೀಡೆ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ

0

ಮುಂಬೈ: ಅಫ್ಘಾನಿಸ್ತಾನ ವಿರುದ್ದದ ಟಿ20 ಸರಣಿ ಗೆದ್ದ ಭಾರತ ತಂಡ ಇದೀಗ ಮತ್ತೆ ಟೆಸ್ಟ್ ಮೂಡ್ ಗೆ ಮರಳಿದೆ. ಈ ವರ್ಷದ ಅತ್ಯಂತ ಯಶಸ್ವಿ ಸರಣಿಯಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಅಘಾತವೊಂದು ಎದುರಾಗಿದೆ.

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರು ಅಲಭ್ಯರಾಗಿದ್ದಾರೆ. ಈ ಬಗ್ಗೆ ಸ್ವತಃ ಬಿಸಿಸಿಐ ವರದಿ ಮಾಡಿದೆ.

ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಅವರು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಬಿಸಿಸಿಐ ಹೇಳಿದೆ. ಕೊಹ್ಲಿ ಬದಲಿಯಾಗಿ ಯಾವುದೇ ಆಟಗಾರನನ್ನು ಇದುವರೆಗೆ ತಂಡಕ್ಕೆ ಸೇರಿಸಲಾಗಿಲ್ಲ.

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಕಾರಣ ನೀಡಿ ಗೈರಾಗಿದ್ದರು. ಆದರೆ ಯಾವ ಕಾರಣಕ್ಕಾಗಿ ವಿರಾಟ್ ಸತತ ರಜೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿಲ್ಲ.

ವಿರಾಟ್ ಈಗಾಗಲೇ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ, ಈ ವಿಷಯದ ಬಗ್ಗೆ ಅವರಿಗೆ ನಾಯಕನ ಬೆಂಬಲವಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮುಂತಾದವರ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಬರಲಿದೆ.

ಭಾರತವು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲನೆಯ ಪಂದ್ಯ ಜನವರಿ 25 ರಂದು ಹೈದರಾಬಾದ್‌ ನಲ್ಲಿ ಆರಂಭವಾಗದೆ. ಸರಣಿಯ ಎರಡನೇ ಪಂದ್ಯವು ಫೆಬ್ರವರಿ 2 ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಮರಳುವ ನಿರೀಕ್ಷೆಯಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉ.ನಾ) ಮತ್ತು ಅವೇಶ್ ಖಾನ್