ಮನೆ Uncategorized ವಿಶ್ವಕರ್ಮ ಸಮಾಜದ ಮುಖಂಡ‌ ಕೆ.ಪಿ.ನಂಜುಂಡಿ ಕಾಂಗ್ರೆಸ್‌ ಗೆ ಸೇರ್ಪಡೆ

ವಿಶ್ವಕರ್ಮ ಸಮಾಜದ ಮುಖಂಡ‌ ಕೆ.ಪಿ.ನಂಜುಂಡಿ ಕಾಂಗ್ರೆಸ್‌ ಗೆ ಸೇರ್ಪಡೆ

0

ಬೆಂಗಳೂರು: ವಿಶ್ವಕರ್ಮ ಸಮಾಜದ ಮುಖಂಡ‌ ಕೆ.ಪಿ.ನಂಜುಂಡಿ ಅವರು ಇಂದು (ಬುಧವಾರ) ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದಾರೆ.

Join Our Whatsapp Group

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕೆ.ಪಿ.ನಂಜುಂಡಿ ಕಾಂಗ್ರೆಸ್‌ಗೆ ಸೇರಿದ್ದಾರೆ.

ನಂಜುಂಡಿ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದರು.

ನನ್ನನ್ನು ಸರಿಯಾಗಿ ನಡೆಸಿಕೊಳ್ಳದೆ ಬಿಜೆಪಿ ನಿರ್ಲಕ್ಷಿಸಿತು. ಸಾಮರ್ಥ್ಯ ಆಧರಿಸಿ ಜವಾಬ್ದಾರಿ, ಸ್ಥಾನ ಕೊಡಲಿಲ್ಲ. ಬೇಸರಗೊಂಡು ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕೆ.ಪಿ.‌ನಂಜುಂಡಿ ತಿಳಿಸಿದ್ದರು.

ಹಲವು ವರ್ಷಗಳಿಂದ ಸಮಾಜ ಸಂಘಟಿಸಿದ್ದೇನೆ. ನನ್ನ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಲು ನೆರವಾಗುವ ಯಾವುದೇ ಸ್ಥಾನಮಾನ ಬಿಜೆಪಿ ನೀಡಲಿಲ್ಲ. ಪರಿಷತ್ತು ಸದಸ್ಯತ್ವದಿಂದ ಏನೂ ಫಲವಿಲ್ಲ. ಸಚಿವ ಸ್ಥಾನ ನೀಡಿದ್ದರೆ, ಉತ್ತಮ ಕೆಲಸ ಮಾಡಬಹುದಿತ್ತು ಎಂದು ನಂಜುಂಡಿ ಅವರು ಅಭಿಪ್ರಾಯಪಟ್ಟಿದ್ದರು.

ವಿಶ್ವಕರ್ಮ ಸೇರಿದಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿ ಅನುದಾನ ಕೊಡಬೇಕು ಎಂದು ಬಿಜೆಪಿ ಸರ್ಕಾರಕ್ಕೆ ಕೋರಿದ್ದೆ. ಆದರೆ, ಸ್ಪಂದನೆ ಸಿಗಲಿಲ್ಲ ಎಂದು ಹೇಳಿದ್ದರು.

ಕೆಪಿಸಿಸಿ ಅಧ್ಯಕ್ಷರು ನನ್ನ ಜೊತೆ ಮಾತನಾಡಿದ ಬಳಿಕ ಯಡಿಯೂರಪ್ಪ ಸೇರಿ ಬಿಜೆಪಿಯ ಯಾವ ನಾಯಕರು ಸಂಪರ್ಕಿಸಲಿಲ್ಲ. ನಾನು ಅವರಿಗೆ, ಪಕ್ಷಕ್ಕೆ ಅಗತ್ಯವಿಲ್ಲ ಎಂದರ್ಥ. ಡಿ.ಕೆ.ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗುವೆ ಎಂದಿದ್ದರು.