ಮೈಸೂರು(Mysuru): ರಾಜಕೀಯವಾಗಿ ಬೆಳೆಸಿದ ದೇವರಾಜ ಅರಸು ಅವರಿಗೆ ವಿಶ್ವನಾಥ್, ಮಲ್ಲಿಕಾರ್ಜುನ ಖರ್ಗೆ ಚೂರಿ ಹಾಕಿದರು ಎಂದು ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅರೋಪಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ನಕಲಿ ಶಾಮ. ರಾಜಕೀಯದ ಹಿನ್ನೆಲೆಯೇ ಗೊತ್ತಿಲ್ಲದವ ಎಂದು ಟೀಕಿಸಿದರು.
ಆತ ಗೆದ್ದು ವಿಧಾನ ಪರಿಷತ್ ಸದಸ್ಯನಾದವನಲ್ಲ. ನಾಮಕರಣಗೊಂಡವ. ನಾನು ರಾಜಕಾರಣಕ್ಕೆ ಬಂದು 50 ವರ್ಷ ಸಮೀಪಿಸುತ್ತಿದೆ. ನಿಮ್ಮಂತೆ, ಯಾವುದೋ ಸ್ಥಾನಕ್ಕೋ, ಅಧಿಕಾರಕ್ಕೋ ಪಕ್ಷಾಂತರ ಮಾಡಿದವನಲ್ಲ ಎಂದು ತಿರುಗೇಟು ನೀಡಿದರು.
ತಮ್ಮ ರಾಜಕೀಯ ಜೀವನದ ಏಳು–ಬೀಳಿನ ಹಾದಿಯನ್ನು ನೆನಪಿಸಿಕೊಂಡ ಪ್ರಸಾದ್, ವಿಶ್ವನಾಥ್ ಅವರಿಗೆ ಸಹಾಯ ಮಾಡಿದ್ದರ ಪಟ್ಟಿಯನ್ನೂ ನೀಡಿದರು.
ನಾನು ಆತನಂತೆ, ಚುನಾವಣೆಯಲ್ಲಿ ಸೋಲಿಸಿದವರ ಬಗ್ಗೆ ಎಂದೂ ಟೀಕಿಸಿಲ್ಲ. ಯಾವುದೇ ಪಕ್ಷಕ್ಕೆ ಹೋದರೂ ಹೊರೆಯಾಗಿಲ್ಲ; ಬದಲಿಗೆ ಆಸ್ತಿಯಾಗಿದ್ದೇನೆ. ಇದ್ದ ಪಕ್ಷದ ಬಗ್ಗೆಯೇ ಬಾಯಿಗೆ ಬಂದಂತೆ ಮಾತನಾಡಿಲ್ಲ. ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿದ್ದೇನೆ ಎಂದರು.
ವಿಶ್ವನಾಥ, ಸೋತ ನಂತರ ಗೆದ್ದ ಯಾರ ಬಗ್ಗೆಯಾದರೂ ಮಾತನಾಡದೆ ಬಿಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.
ನಿಮಗೆ ಟಿಕೆಟ್ ಕೊಡಿಸಿದವರಾರು, ಮಂತ್ರಿ ಮಾಡಿದವರಾರು? ಸಚಿವ ಸ್ಥಾನ ಕೊಡಿಸಲು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟವರಾರು? ನಾನು ಮಂತ್ರಿಯಾಗಲು ಆಸೆ ಪಡಲಿಲ್ಲ. ಆದರೆ, ಆತನಿಗೆ ಕೊಡಿಸಿದೆ. ದೆಹಲಿಯಲ್ಲಿ ನಾಲ್ಕು ವರ್ಷ ಸಾಕಿದೆ. ನನ್ನ ಪಾಲಿಗೆ ಪ್ರಸಾದ್ ತಿರುಪತಿಯ ತಿಮ್ಮಪ್ಪ ಇದ್ದಂತೆ ನನ್ನ ಹೇಳಿದ್ದನ್ನು ಮರೆತಿರಾ, ನಾಚಿಕೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಸೇರಿದಂತೆ 42 ಮಂದಿಗೆ ಟಿಕೆಟ್ ಕೊಡಿಸಿದ್ದೆ. ಅವರೆಲ್ಲರೂ ನನ್ನನ್ನು ಗೌರವದಿಂದ ಕಾಣುತ್ತಾರೆ. ಆದರೆ, ಈ ವಿಶ್ವನಾಥ್ ಕೃತಜ್ಞತೆ ಇಲ್ಲದ. ಸಿದ್ದರಾಮಯ್ಯ ಅಹಿಂದ ಕಟ್ಟಿಕೊಟ್ಟವನು ನಾನು. ಕಾಂಗ್ರೆಸ್’ಗೆ ಮತ್ತೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿರಲಿಲ್ಲ. ಅವರೇ ಸೇರಿಸಿಕೊಂಡಿದ್ದರು. ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ತಿಳಿಸಿದರು.
ಅಶೋಕಪುರಂಗೆ ಏನು ಕೊಡುಗೆ ನೀಡಿದ್ದೇನೆ ಎನ್ನುವುದನ್ನು ಅಲ್ಲಿನ ಜನರನ್ನು ಹೋಗಿ ಕೇಳಿದರೆ ಗೊತ್ತಾಗುತ್ತದೆ. ನಾನು ವಿಶ್ವನಾಥನಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ ಎಂದರು.