ಮೈಸೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಗೆ ನಿಯುಕ್ತಿಯಾದ ಸಾಮಾನ್ಯ ವೀಕ್ಷಕರು ಹಾಗೂ ಜಿಲ್ಲಾಧಿಕಾರಿಗಳು ಮತ ಎಣಿಕಾ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾಮಾನ್ಯ ವೀಕ್ಷಕರಾದ ಟಿ ನರಸೀಪುರ ವಿಧಾನ ಸಭಾ ಕ್ಷೇತ್ರದ ರಾಮ್ ಪ್ರತಾಪ್ ಸಿಂಗ್ ಜಾಡೋನ್, ಹುಣಸೂರು ಮತ್ತು ಹೆಚ್ .ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ದಿವೇಶ್ ಸೆಹರ , ಕೃಷ್ಣರಾಜ ಮತ್ತು ಚಾಮರಾಜ ವಿಧಾನ ಸಭಾ ಕ್ಷೇತ್ರದ ಧೀರಜ್ ಗುಪ್ತ ಅವರು ಮಹಾರಾಣಿ ವಾಣಿಜ್ಯ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಮತ ಎಣಿಕಾ ಕೇಂದ್ರ ಹಾಗೂ ಭದ್ರತಾ ಕೊಠಡಿಯಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಹಾಗೂ ಸಿದ್ದತೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ ಕೆ.ವಿ. ರಾಜೇಂದ್ರ ಅವರು ವೀಕ್ಷಕರಿಗೆ ಮಾಹಿತಿ ನೀಡಿದರು.
ಮತ ಎಣಿಕಾ ಕೇಂದ್ರದಲ್ಲಿ ಭದ್ರತೆಯ ದೃಷ್ಟಿಯಿಂದ ಸಿ.ಸಿ.ಟಿ.ವಿ ವ್ಯವಸ್ಥೆ, ಬ್ಯಾರಿಕೇಡಿಂಗ್ ವ್ಯವಸ್ಥೆ ಮತ್ತು ಮತ ಎಣಿಕೆ ದಿನದಂದು ವಾಹನ ದಟ್ಟಣೆ ತಡೆಯಲು ವಿವಿಧ ಕಡೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಮೂಡಾ ಆಯುಕ್ತರಾದ ದಿನೇಶ್ ಕುಮಾರ್ ಹಾಗೂ ಸಂಬಂಧಪಟ್ಟ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.