ಮನೆ ರಾಜ್ಯ ಆರ್ಥಿಕ ಸಂಕಷ್ಟದಿಂದ ವೈಜಾಗ್ ಸ್ಟೀಲ್ ಕಾರ್ಖಾನೆ ಪಾರು; ಹಂತ ಹಂತವಾಗಿ ಸಾಲ ತೀರಿ ಎಂದ ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸಂಕಷ್ಟದಿಂದ ವೈಜಾಗ್ ಸ್ಟೀಲ್ ಕಾರ್ಖಾನೆ ಪಾರು; ಹಂತ ಹಂತವಾಗಿ ಸಾಲ ತೀರಿ ಎಂದ ಹೆಚ್‌.ಡಿ.ಕುಮಾರಸ್ವಾಮಿ

0

ನವದೆಹಲಿ: ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ಖಾಸಗೀಕರಣದ ಹೊಸ್ತಿಲಲ್ಲಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (RNIL) ಅಥವಾ ವೈಜಾಗ್ ಸ್ಟೀಲ್ ಕಂಪನಿಯನ್ನು ₹11,440 ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲಾಗುವುದು ಎಂದು ಕೇಂದ್ರದ ಉಕ್ಕು -ಬೃಹತ್ ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದರು.

Join Our Whatsapp Group

ಇದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿರುವ ಕುಮಾರಸ್ವಾಮಿ ಅವರು; ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದೆ. ದೇಶೀಯ ಉಕ್ಕು ಕ್ಷೇತ್ರಕ್ಕೆ ಶಕ್ತಿ ತುಂಬುವ ದಿಟ್ಟ ಹೆಜ್ಜೆ ಇದಾಗಿದೆ ಎಂದರು.

ನವದೆಹಲಿ ಉಕ್ಕು ಸಚಿವಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಕುಮಾರಸ್ವಾಮಿ ಅವರು, ತಮ್ಮ ಇಲಾಖೆಯ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ ಹಾಗೂ ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು ಅವರ ಜತೆಗೂಡಿ ವೈಜಾಗ್ ಸ್ಟೀಲ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ವೈಜಾಗ್ ಸ್ಟೀಲ್ ಪುನಚ್ಚೆತನ ಪ್ಯಾಕೇಜ್ ಗೆ ಅನುಮೋದನೆ ನೀಡಲಾಗಿದೆ ಎಂದು ಉಕ್ಕು ಸಚಿವರು ಹೇಳಿದರು.

ಪ್ರಧಾನಿ ಮೋದಿ ಅವರು ಸಂಕ್ರಾಂತಿ ಹೊತ್ತಿಗೆ ಆಂಧ್ರ ಪ್ರದೇಶ ಜನತೆಗೆ ಶುಭ ಸುದ್ದಿ ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆ ವಿಶಾಖಪಟ್ಟಣ ಸ್ಟೀಲ್ ಕಾರ್ಖಾನೆಯ ಪುನಚ್ಚೆತನ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿಗಳಿಗೆ ಹಾಗೂ ನಮ್ಮ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುವೆ ಎಂದು ಸಚಿವರು ಹೇಳಿದರು.

ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ:*

ವಿಶಾಖಪಟ್ಟಣ (ಆಂಧ್ರ ಪ್ರದೇಶ): ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿದ್ದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (RNIL) ಅಥವಾ ವೈಜಾಗ್ ಸ್ಟೀಲ್ ಕಂಪನಿಗೆ ಕೇಂದ್ರ ಸರಕಾರ ₹11,440 ಕೋಟಿ ಮೊತ್ತದ ಬೃಹತ್ ಪುನಚ್ಚೇತನ ಪ್ಯಾಕೇಜ್ ನೀಡಿದ್ದು, ಕಾರ್ಖಾನೆಯನ್ನು ಬಹುತೇಕ ಸಂಕಷ್ಟದಿಂದ ಪಾರು ಮಾಡಲಾಗಿದೆ ಎಂದು ಕೇಂದ್ರದ ಉಕ್ಕು-ಬೃಹತ್ ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪ್ಯಾಕೇಜ್ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು; ಕಾರ್ಖಾನೆಯ ಮೂರೂ ಬ್ಲಾಸ್ಟ್ ಪರ್ನೆಸ್ (ಊದು ಕುಲುಮೆ) ಗಳಿಗೆ ಚಾಲನೆ ಕೊಟ್ಟು ಕೆಲವೇ ತಿಂಗಳಲ್ಲಿ ಇಡೀ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಉಕ್ಕು ಉತ್ಪಾದನೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದರು.

ಕಾರ್ಖಾನೆ ₹35,000 ಕೋಟಿ ಸಾಲ ಹೊಂದಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಯ ದಕ್ಷತೆ, ಕ್ಷಮತೆಯನ್ನು ಹೆಚ್ಚಿಸುತ್ತೇವೆ. ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ಹೊಂದಿದ್ದೇವೆ. ಸಾಲವನ್ನು ಹಂತಹಂತವಾಗಿ ಮರು ಪಾವತಿ ಮಾಡುತ್ತೇವೆ ಎಂದು ಅವರು ಹೇಳಿದರು.

ವೈಜಾಗ್ ಸ್ಟೀಲ್ ಕಾರ್ಖಾನೆಗೆ ಈ ಪ್ಯಾಕೇಜ್ ನಲ್ಲಿ ₹10,300 ಕೋಟಿ ಹೂಡಿಕೆ ಮಾಡಲಾಗುವುದು ಹಾಗೂ ₹1,140 ಕೋಟಿಯನ್ನು ಷೇರು ರೂಪದಲ್ಲಿ ನಿರ್ವಹಣಾ ಬಂಡವಾಳವಾಗಿ ತೊಡಗಿಸಲಾಗುವುದು. ಈ ₹1,140 ಕೋಟಿಯನ್ನು ಹತ್ತು ವರ್ಷಗಳವರೆಗೂ ಹಿಂದಕ್ಕೆ ಪಡೆಯಲು ಅವಕಾಶವಿಲ್ಲ ಎಂದರು ಅವರು.

2030ರ ಹೊತ್ತಿಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ:

ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶೀಯವಾಗಿ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿಯನ್ನು ನಿಗದಿ ಮಾಡಿದ್ದಾರೆ. ಈ ಗುರಿ ಮುಟ್ಟಬೇಕಾದರೆ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈಜಾಗ್ ಸ್ಟೀಲ್ ಪುನಚ್ಚೆತನ ಯೋಜನೆಯನ್ನು ಇದೇ ಉದ್ದೇಶದಿಂದ ರೂಪಿಸಲಾಗಿದೆ. ದೇಶೀಯ ಉಕ್ಕು ಉದ್ಯಮಕ್ಕೆ ಈ ಕಾರ್ಖಾನೆಯ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಪ್ರಧಾನಿಗಳಿಗೆ ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ:

ವೈಜಾಗ್ ಸ್ಟೀಲ್ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವವೇ ಕಾರಣ ಎಂದು ಪುನರುಚ್ಚಿಸಿದ ಸಚಿವ ಕುಮಾರಸ್ವಾಮಿ ಅವರು; ನಾನು ಅತ್ಯಂತ ಪ್ರಾಮಾಣಿಕವಾಗಿ ಪ್ರಧಾನಿಗಳಿಗೆ ಆಂಧ್ರ ಪ್ರದೇಶದ ಎಲ್ಲಾ ಅಣ್ಣ ತಮ್ಮಂದಿರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಏಕೆಂದರೆ ಅವರು ಮನಸ್ಸು ಮಾಡದಿದ್ದರೆ ಈ ಪ್ಯಾಕೇಜ್ ಕೊಡಲು ಸಾಧ್ಯ ಆಗುತ್ತಿರಲಿಲ್ಲ ಎಂದರು.

ವೈಕಾಗ್ ಸ್ಟೀಲ್ ಬಂಡವಾಳ ವಾಪಸಾತಿಗೆ ಕೇಂದ್ರ ಸಂಪುಟದಲ್ಲಿ ನಿರ್ಧಾರ ಮಾಡಲಾಗಿತ್ತು. ಇತಿಹಾಸದಲ್ಲಿ ಯಾವುದೇ ಕಾರ್ಖಾನೆ ಅಥವಾ ಕಂಪನಿಯಿಂದ ಬಂಡವಾಳ ವಾಪಸ್ ನಿರ್ಧಾರ ಕೈಗೊಂಡ ಮೇಲೆ ಅದನ್ನು ಮರು ಪರಿಶೀಲಿಸಿದ ಉದಾಹರಣೆ ಇಲ್ಲ. ಆದರೆ, ವೈಜಾಗ್ ಸ್ಟೀಲ್ ವಿಷಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸಂಪುಟದ ನಿರ್ಧಾರ ಕೈಬಿಟ್ಟು ಪುನಶ್ಚೇತನಕ್ಕೆ ಪ್ಯಾಕೇಜ್ ಕೊಡಲಾಗಿದೆ. ಹೀಗಾಗಿ ಯಾರೇ ಆಗಲಿ ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಸಚಿವರು ಹೇಳಿದರು.

ನಾನು ಉಕ್ಕು ಸಚಿವನಾಗಿ ಬಂದ ಮೇಲೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಭೆಗಳನ್ನು ವೈಜಾಗ್ ಸ್ಟೀಲ್ ಗಾಗಿ ನಡೆಸಿದ್ದೇನೆ. ಬೆಳಗಿನ ಜಾವ ಒಂದೂವರೆ ಗಂಟೆ ವೇಳೆಯಲ್ಲಿ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಭೂಪತಿರಾಜು ಶ್ರೀನಿವಾಸ ವರ್ಮ ಅವರೊಂದಿಗೆ ಸಭೆ ನಡೆಸಲಾಗಿತ್ತು. ಕಾರ್ಖಾನೆಯ ಬಗ್ಗೆ ಮೋದಿ ಅವರ ಸರಕಾರದ ಬದ್ಧತೆ ಏನು ಎಂಬುದು ಇದರಿಂದ ತಿಳಿಯುತ್ತದೆ. ಇದೇ ವೇಳೆ ನಾನು ಹಣಕಾಸು ಸಚಿವರಿಗೂ ಧನ್ಯವಾದ ಹೇಳುವೆ ಎಂದರು ಕುಮಾರಸ್ವಾಮಿ ಅವರು.

ಮೊದಲು ಕಾರ್ಖಾನೆಯ ಪರಿಸ್ಥಿತಿ ನಿರಾಶಾದಾಯಕವಾಗಿತ್ತು. ಇದನ್ನು ಯಾರಿಂದಲೂ ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದರು. ಅಧಿಕಾರಿಗಳ ಆಲೋಚನೆಯೂ ಅದೇ ಆಗಿತ್ತು. ನಾನು ಕಳೆದ ಜುಲೈನಲ್ಲಿ ಕಾರ್ಖಾನೆಗೆ ಭೇಟಿ ಕೊಟ್ಟಾಗ ಎಲ್ಲಾ ಕಾರ್ಮಿಕರ ಕೈಯ್ಯಲ್ಲಿ save rinl ಎನ್ನುವ ಬೋರ್ಡ್ ಗಳು ಇದ್ದವು. ಇವತ್ತು ನಾನು ಮತ್ತೆ ನೋಡುತ್ತಿದ್ದೇನೆ. ‘ಧನ್ಯವಾದ ಮೋದಿ ಜೀ’ ಎನ್ನುವ ಬೋರ್ಡ್ ಗಳು ಕಾಣುತ್ತಿವೆ. ಈ ಪ್ರಯತ್ನದಲ್ಲಿ ಚಂದ್ರಬಾಬು ನಾಯ್ಡು ಅವರು ನೀಡಿದ ಸಹಕಾರವನ್ನು ನಾನು ಸ್ಮರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಡಿಸಿಎಂ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್ ಸೇರಿ ಅನೇಕ ನಾಯಕರು ಕಾರ್ಖಾನೆ ಪುನಶ್ಚೇತನಕ್ಕೆ ಮನವಿ ಮಾಡಿದ್ದರು. ನನ್ನ ಸಹೋದ್ಯೋಗಿ ಭೂಪತಿರಾಜು ಶ್ರೀನಿವಾಸ ವರ್ಮ ಅವರೊಂದಿಗೆ ನಿರಂತರವಾಗಿ ಕೆಲಸ ಮಾಡಿದ್ದೇನೆ ಎಂದು ಅವರು ನುಡಿದರು.

ವೇತನ ಸಮಸ್ಯೆ ಎರಡ್ಮೂರು ತಿಂಗಳಲ್ಲಿ ಇತ್ಯರ್ಥ:

ಕಾರ್ಖಾನೆಯಲ್ಲಿ ಕಳೆದ ಮೂರು ತಿಂಗಳಿಂದ ಕಾರ್ಮಿಕರು ವೇತನ ಇಲ್ಲದೆ ಕೆಲಸ ಮಾಡುತ್ತಾ ಬಂದಿದ್ದಾರೆ. ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಕಾಣುತ್ತಿದೆ. ವೇತನ ಕೊಡುವುದು ಕಷ್ಟವಾಗಿತ್ತು. ಎರಡು ಮೂರು ತಿಂಗಳಲ್ಲಿ ವೇತನ ಪಾವತಿ ವ್ಯವಸ್ಥೆಯನ್ನು ಸರಿ ದಾರಿಗೆ ತರುತ್ತೇವೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ಇಲ್ಲಿಗೆ ಬರುವ ಮುನ್ನ ಬೆಳಗ್ಗೆ ತಿರುಪತಿಗೆ ತೆರಳಿ ಬಾಲಾಜಿ ದರ್ಶನ ಪಡೆದು ಬಂದಿದ್ದೇನೆ. ಈ ಕಾರ್ಖಾನೆಯನ್ನು ಉಳಿಸು, ಕಾರ್ಮಿಕರಿಗೆ ಶಕ್ತಿ ಕೊಡು, ಪ್ರಧಾನಿಗಳ ವಿಕಸಿತ ಭಾರತ ಕನಸು ನನಸಾಗಲಿ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆಯ ಸಂಕಲ್ಪ ಈಡೇರಲಿ ಎಂದು ಬೇಡಿಕೊಂಡೆ. ಆ ಬಾಲಾಜಿಯ ಅನುಗ್ರಹದಂತೆ ಎಲ್ಲಾ ನಡೆದಿದೆ ಎಂದು ಭಾವುಕರಾಗಿ ಹೇಳಿದರು ಸಚಿವರು.

ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಆಂಧ್ರ ಪ್ರದೇಶದ ಶಿಕ್ಷಣ ಸಚಿವ ಸತ್ಯಕುಮಾರ್ ಯಾದವ್, ಸಂಸದರಾದ ಭರತ್, ಅಪ್ಪಲನಾಯ್ದು, ಸಿ.ಎಂ.ರಮೇಶ್, ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂದ್ರಿಕ್ ಹಾಗೂ ಸ್ಥಳೀಯ ಶಾಸಕರು ಮಾತನಾಡಿದರು.