ಹೆಚ್.ಡಿ.ಕೋಟೆಯ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಮತದಾನ ಜಾಗೃತಿ
ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ -2024ರ ಹಿನ್ನೆಲೆ ಜಿಲ್ಲಾ ಮತ್ತು ತಾಲ್ಲೂಕು ಸ್ವೀಪ್ ಸಮಿತಿ, ಗ್ರಾಮ ಪಂಚಾಯಿತಿ ಹಾಗೂ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗಡಿಭಾಗವಾದ ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು ಉದ್ಘಾಟಿಸಿದರು.
ಮತದಾನ ಶೇಕಡವಾರು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಭಾಗವಾದ ಸಾರ್ವಜನಿಕರಿಗೆ ಮತದಾನ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತದಾರರು ಹಣ, ಸಾರಾಯಿ ಸೇರಿದಂತೆ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನೈತಿಕ ಮತದಾನ ಬೆಂಬಲಿಸಬೇಕು. ಏಪ್ರಿಲ್ 26 ರಂದುತಮ್ಮ ಕುಟುಂಬದವರು ಹಾಗೂ ನೆರೆಹೊರೆಯವರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಕೆ.ಎಂ ಗಾಯಿತ್ರಿ ಅವರು ಮಾತನಾಡಿ, ಬುಡಕಟ್ಟು, ಆದಿವಾಸಿ ಜನರು ವಲಸೆ ಹೋಗಬಾರದು, ಕೆಲಸಕ್ಕಾಗಿ ಬೇರೆ ಕಡೆ ಹೋಗಿರುವವರನ್ನು ಕರೆಸಿ ಮತದಾನ ಮಾಡುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಸಹಕರಿಸಬೇಕು ಎಂದು ಹೇಳಿದರು.
ಮತಗಟ್ಟೆ ಕೇಂದ್ರಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ನೆರಳು ಹಾಗೂ ವಾಹನದ ವ್ಯವಸ್ಥೆ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸರತಿ ಸಾಲು ಹಾಗೂ ವಿಶೇಷ ಚೇತನರಿಗೆ ನೇರವಾಗಿ ಮತಗಟ್ಟೆಗೆ ಪ್ರವೇಶ ಸೇರಿದಂತೆ ಎಲ್ಲಾ ರೀತಿಯ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಏ.26ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು. ಬಳಿಕ ಮತದಾರರ ಮನೆಗೆ ತೆರಳಿ ವೋಟರ್ ಗೈಡ್ ಮತ್ತು ವೋಟರ್ ಸ್ಲಿಪ್ ವಿತರಣೆ ಮಾಡಲಾಯಿತು.
ಈ ವೇಳೆ ಸಹಾಯಕ ಚುನಾವಣಾಧಿಕಾರಿ ಕುಮುದಾ ಶರತ್, ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಧರಣೇಶ್ ಎಸ್.ಪಿ, ಸಹಾಯಕ ನಿರ್ದೇಶಕರು (ಗ್ರಾ.ಉ) ರಘುನಾಥ್ ಕೆ.ಎಂ, ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ ಕೆ, ಪಿಡಿಒ ದೇವರಾಜು ಎಂ.ಕೆ,ಎನ್.ಆರ್.ಎಲ್.ಎಂ ಸಂಜೀವಿನಿ ಒಕ್ಕೂಟ ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.














