ಮನೆ ರಾಜ್ಯ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ: ಸಿಇಓ ಕೆ.ಎಂ.ಗಾಯಿತ್ರಿ

ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ: ಸಿಇಓ ಕೆ.ಎಂ.ಗಾಯಿತ್ರಿ

0

ಹೆಚ್.ಡಿ.ಕೋಟೆ: ಮತದಾರರು ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ಹೇಳಿದರು.

Join Our Whatsapp Group

ತಾಲ್ಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಗಾಲ ಗ್ರಾಮ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ಗುರುವಾರ  ಸಖಿ ಮತಗಟ್ಟೆ ವೀಕ್ಷಿಸಿ, ಬಳಿಕ ಸ್ವೀಪ್ ಚಟುವಟಿಕೆಯಡಿ ಮತದಾನ ಜಾಗೃತಿ ಮೂಡಿಸುವ ಸ್ವಚ್ಛತಾ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಕರ್ನಾಟಕ ವಿಧಾನಸಭೆ ಚುನಾವಣಗೆ ಮೇ 10 ರಂದು ಮತದಾನ ನಡೆಯಲಿದೆ ಶೇ. ಮತದಾನ ಪ್ರಮಾಣ ಹೆಚ್ಚಿಸಲು ಸ್ವ-ಇಚ್ಛೆಯಿಂದ ಎಲ್ಲಾ ಮತದಾರರು  ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾರರಿಗೆ ಮತದಾನ ಕುರಿತು ಅರಿವು ಮೂಡಿಸಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಚುನಾವಣೆ ಅಂತಿಮ ದಿನಗಳ ವರೆಗೂ ಈ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸ್ವ-ಸಹಾಯ ಸಂಘದ ಮಹಿಳೆಯರು ಭಾಗಿ: ಮಾದಾಪುರ ಗ್ರಾ.ಪಂ ಕೋಳಗಾಲ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾದಾಪುರ ಗ್ರಾ.ಪಂ ಮಟ್ಟದ ಒಕ್ಕೂಟದ ಸ್ವ-ಸಹಾಯ ಸಂಘ ಮಹಿಳೆಯರು ಹಾಗೂ ಅಂತರಸಂತೆಯಲ್ಲಿ ನಡೆದ ಸ್ವೀಪ್ ಕಾರ್ಯಕ್ರಮದಲ್ಲಿ  ಭಾಗಿಯಾಗಿದ್ದ  ಅಂತರಸಂತೆ, ನೂರಲಕುಪ್ಪೆ ಹಾಗೂ ಹೊಸಹೊಳಲು ಗ್ರಾ.ಪಂ ಮಟ್ಟದ ಒಕ್ಕೂಟದ ಸ್ವ-ಸಹಾಯ ಸಂಘ ಮಹಿಳೆಯರಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ತಾವು ಮತದಾನ ಮಾಡಿ, ತಮ್ಮ ನೆರೆಹೊರೆಯವರಿಗೂ ಮತದಾನ ಮಾಡಲು ಪ್ರೇರೇಪಿಸಿ ಎಂದು ಹೇಳಿದರು.

ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ: ತಾಲ್ಲೂಕಿನ ಹೊಸಹೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವನ್ಯಜೀವಿ ವಲಯದ ಅರಣ್ಯದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಲಾಂಟನಾ ತೆರವು ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರೊಂದಿಗೆ ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ಸಮಾಲೋಚನೆ  ಮೇ 10 ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಿದರು.

ಅಂತರಸಂತೆ ವನ್ಯಜೀವಿ ವಲಯದ ಅರಣ್ಯದಲ್ಲಿ ನಡೆದ ಸ್ವೀಪ್ ಕಾರ್ಯಕ್ರಮದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆರಾಲ್ಡ್ ರಾಜೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ, ಅಂತರಸಂತೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಜು, ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ, ಸಹಾಯಕ ನಿರ್ದೇಶಕ ಕಿರಣ್ ಆರ್ ಜಹಗೀರ್ ಧಾರ್ ಸೇರಿದಂತೆ ಇತರರು ಇದ್ದರು.

ಮಾಳದ ಹಾಡಿಯಲ್ಲಿ ಕೋಲಾಟ ಮೂಲಕ  ಮತ  ಜಾಗೃತಿ:

ಹೆಚ್.ಡಿ.ಕೋಟೆ ತಾಲ್ಲೂಕಿನ ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳದ ಹಾಡಿಯಲ್ಲಿ ತಾಲ್ಲೂಕು ಸ್ವೀಪ್ ಸಮಿತಿ, ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸ್ವೀಪ್ ಚಟುವಟಿಕೆಯಡಿ ಹಾಡಿ ಮಕ್ಕಳು ಸೋಂಟಕ್ಕೆ ಸೊಪ್ಪು ಕಟ್ಟಿಕೊಂಡು ಮನಮೋಹಕವಾಗಿ ನೃತ್ಯ ಮಾಡುತ್ತಾ ಕೋಲಾಟ ಹಾಡುವ ಮೂಲಕ ಹಾಡಿ ಜನರಿಗೆ ಮತದಾನ ಕುರಿತು ಜಾಗೃತಿ ಮೂಡಿಸಿದರು.