ಮೈಸೂರು: ನಮ್ಮದು ಪ್ರಜಾಪ್ರಭುತ್ವ ದೇಶ, ನಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಇದು ಸಂವಿಧಾನದ ಕರ್ತವ್ಯವೂ ಹೌದು ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಮತದಾನ ಜಾಗೃತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಮತದಾನದ ಜಾಗೃತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಹೆಣ್ಣು ಮಗುವು ಜನಿಸುವ ಪೂರ್ವದಿಂದಲೂ ಸಹ ಅದನ್ನು ರಕ್ಷಿಸಲು ಕಾನೂನುಗಳಿವೆ. ಜಗತ್ತಿನಲ್ಲಿ ಪುರುಷ – ಮಹಿಳೆ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯಾವುದೇ ಅಸಮಾನತೆ, ತಾರತಮ್ಯ ಮಾಡಬಾರದು ಎಂದರು.
ತೊಟ್ಟಿಲು ತೂಗುವ ಕೈ ದೇಶವನ್ನು ತೂಗುತ್ತದೆ. ನಮ್ಮ ಮತ ನಮ್ಮ ಹಕ್ಕು , ಪ್ರತಿಯೊಬ್ಬ ಹೆಣ್ಣು ಮಕ್ಕಳು ಸಹ ಚುನಾವಣಾ ಹಬ್ಬದಲ್ಲಿ ಪಾಲ್ಗೊಂಡು ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಕೆ. ವಿ ರಾಜೇಂದ್ರ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪುರುಷನಂತೆ ಮಹಿಳೆಯು ಕೂಡ ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದು ತನ್ನ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದು. ಮಹಿಳೆ ಪುರುಷನಿಗೆ ಸಮಾನಳಲ್ಲ ಆಕೆ ಪುರುಷನಿಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಾಳೆ. ಮನೆಯನ್ನು ಮುನ್ನೆಡೆಸುವ ಮಹಿಳೆ ದೇಶವನ್ನು ಮುನ್ನೆಡಸಲು ಸಹಕಾರಿಯಾಗಿರುತ್ತಾಳೆ. ಪ್ರತಿಯೊಬ್ಬ ಮಹಿಳೆಯೂ ಸಹ ಕಡ್ಡಾಯವಾಗಿ ಮತದಾನ ಮಾಡಬೇಕು.
ಮಹಿಳೆಯರಲ್ಲಿ ಹೆಚ್ಚಿನ ಶಕ್ತಿ ಇದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳನ್ನು ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೆ ಇಬ್ಬರಿಗೂ ಒಂದೇ ರೀತಿಯ ಸಮಾನತೆಯನ್ನು ನೀಡಿ ಬೆಳೆಸಬೇಕು ಎಂದರು.
ಅಲ್ಲದೆ ಜಿಲ್ಲೆಯಲ್ಲಿ ಮಹಿಳಾ ಮತದಾನವೇ ಜಾಸ್ತಿಯಿದ್ದು , ಈ ಬಾರಿಯೂ ಸಹ ಪ್ರತಿಶತ ನೂರರಷ್ಟು ಮಹಿಳಾ ಮತದಾನ ಆಗಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಜಾಗೃತವಾಗಿ , ನೈತಿಕವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಹಾಗೆಯೇ ಸುತ್ತಾ ಮುತ್ತಾಲಿನ ವಾತಾವರಣದ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಪ್ರೇರೇಪಣೆ ಮಾಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಕೆ. ಎಂ. ಗಾಯತ್ರಿ ಅವರು ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಂದು ಹೆಣ್ಣು ಸ್ವಾಭಿಮಾನಿಯಾಗಿ ದುಡಿಯುತ್ತ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಮತದಾನದಲ್ಲಿ ಹಿಂದುಳಿಯುತ್ತಿದ್ದಾರೆ ಹಾಗಾಗಿ ಅವರಿಗೆ ಮತದಾನದ ಮಹತ್ವವನ್ನು ತಿಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಅವರು ಮಾತನಾಡಿ ಪ್ರತಿಯೊಬ್ಬ ಮಹಿಳೆಯು ಒಂದು ಶಕ್ತಿ, ಯಾವುದಕ್ಕೂ ಹೆದರದೆ ಧೈರ್ಯವಾಗಿ ಸಮಸ್ಯೆಯನ್ನು ಎದುರಿಸಬೇಕು. ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಉತ್ತಮ ಅಭ್ಯರ್ಥಿಯನ್ನು ನಾವೇ ಆಯ್ಕೆಮಾಡುವ ಅವಕಾಶವಿದೆ ಆದ್ದರಿಂದ ಎಲ್ಲರೂ ಸಹ ಕಡ್ಡಾಯವಾಗಿ ಮತದಾನ ಮಾಡಿ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಆಕಾಶವಾಣಿ ವತಿಯಿಂದ ಮತದಾನದ ಮಹತ್ವ ಕುರಿತು ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಾದ ಪ್ರಬಂಧ ರಚನೆ, ರಸಪ್ರಶ್ನೆ, ರೀಲ್ಸ್ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ಆಯುಕ್ತರಾದ ರಮೇಶ್. ಬಿ. ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿಯಾದ ಮಾಲತಿ ಪ್ರಿಯಾ, ಕೇಂದ್ರ ಸರ್ಕಾರದ ಚುನಾವಣಾ ಮಾಹಿತಿ ಅಧಿಕಾರಿಗಳಾದ ಶೃತಿ, ಚುನಾವಣಾ ರಾಯಭಾರಿಯಾದ ತನಿಷ್ಕಾ ಮೂರ್ತಿ ಹಾಗೂ
ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.