ಮೈಸೂರು: ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯತ್ ಮತ್ತು ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಕಾರ್ಖಾನೆಯ ನೌಕರರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ, ಮತದಾನವನ್ನು ಸಂವಿಧಾನ ನಮಗೆ ನೀಡಿರುವ ಮೌಲ್ಯಯುತ ಹಕ್ಕಾಗಿದ್ದು, ಮತದಾನ ದಿನವಾದ ಮೇ.10 ರಂದು ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ತಿಳಿಸಿದರು.
ಶ್ರಮಿಕ ವರ್ಗದವರಾದ ನಿಮ್ಮ ಕೈಯಲ್ಲಿ ದೇಶದ ಅಭಿವೃದ್ಧಿ ಸಾಧ್ಯವಿದೆ. ಅದರಂತೆ ಉತ್ತಮ ಆಡಳಿತಕ್ಕಾಗಿ ಮತದಾನ ಅತ್ಯಾವಶ್ಯಕವಾಗಿದೆ. ಆದ್ದರಿಂದ ನೀವೂ ಮತದಾನ ಮಾಡುವ ಜೊತೆಗೆ ನಿಮ್ನ ಕುಟುಂಬದವರೂ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದು ನೌಕರರಿಗೆ ಕರೆ ನೀಡಿದರು.
ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಡಿ.ಗಿರೀಶ್ ಅವರು ಮಾತಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಮತದಾನ ಪ್ರಬಲ ಅಸ್ತ್ರವಾಗಿದ್ದು, ಹೀಗಾಗಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿದರು.
ಇದೇ ಸಂದರ್ಭದಲ್ಲಿ ಕಾರ್ಖಾನೆ ನೌಕರರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪ ನಿರ್ದೇಶಕರಾದ ಮಂಜುಳ, ರೇಷ್ಮೆ ನೇಯ್ಗೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಎಸ್.ಜಿ.ಸಿದ್ಧಲಿಂಗ ಪ್ರಸಾದ್ ಅವರು, ಬಿ.ಇ.ಒ ಕೃಷ್ಣ, ಸಹಾಯಕ ನಿರ್ದೇಶಕ(ಗ್ರಾ.ಉ)ರಾದ ಕೆ.ಎಂ.ರಘುನಾಥ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್, ರೇಷ್ಮೆ ವಿಸ್ತರಣಾಧಿಕಾರಿ ಎಸ್.ವಿ.ಕುಂಬಾರ ಅವರು ಸೇರಿದಂತೆ ಕಾರ್ಖಾನೆಯ 350ಕ್ಕೂ ಹೆಚ್ಚು ಮಂದಿ ನೌಕರರು ಭಾಗವಹಿಸಿದ್ದರು.