ಮನೆ ರಾಷ್ಟ್ರೀಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇಂದು ಮತದಾನ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇಂದು ಮತದಾನ

0

ನವದೆಹಲಿ: ಭಾರೀ ಕುತೂಹಲ ಮೂಡಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ತೋರಣ ಕಟ್ಟಲಾಗಿದೆ. ರಾಜ್ಯದ ಎಲ್ಲ 288 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ.

Join Our Whatsapp Group

ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 288 ಸ್ಥಾನಗಳಿಗೆ ಒಟ್ಟು 4,136 ಮಂದಿ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ 2,086 ಸ್ವತಂತ್ರ ಅಭ್ಯರ್ಥಿಗಳು. 9,63,69,410 ನೋಂದಾಯಿತ ಮತದಾರರಿದ್ದಾರೆ. ಕೇಂದ್ರ ಚುನಾವಣಾ ಆಯೋಗ 1,00,186 ಮತಗಟ್ಟೆಗಳನ್ನು ಸ್ಥಾಪಿಸಿದೆ. ಚುನಾವಣಾ ಆಯೋಗದ ಪ್ರಕಾರ ಸುಮಾರು 6 ಲಕ್ಷ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುತ್ತಿದ್ದಾರೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

‘ಮಹಾ’ ಮೈತ್ರಿಗಳ ಯುದ್ಧ: ಮಹಾರಾಷ್ಟ್ರದಲ್ಲಿ ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಏಕನಾಥ್​ ಶಿಂಧೆ ನೇತೃತ್ವದ ಶಿವಸೇನೆಯ ‘ಮಹಾಯುತಿ’ ಮೈತ್ರಿಯು ಕಣಕ್ಕಿಳಿದಿದೆ. ಇದಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್)ಯ ‘ಮಹಾವಿಕಾಸ್ ಅಘಾಡಿ’ಯು ಸಜ್ಜಾಗಿದೆ.

ಆಡಳಿತಾರೂಢ ಮಹಾಯುತಿಯ ಭಾಗವಾಗಿರುವ ಬಿಜೆಪಿ 149 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 81 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಹಾವಿಕಾಸ್ ಅಘಾಡಿಯಲ್ಲಿರುವ ಕಾಂಗ್ರೆಸ್ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಶಿವಸೇನೆಯ ಯುಬಿಟಿ 95 ಅಭ್ಯರ್ಥಿಗಳನ್ನು ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯಿಂದ 86 ​​ಅಭ್ಯರ್ಥಿಗಳಿದ್ದಾರೆ.

ಜಾರ್ಖಂಡ್‌ ನಲ್ಲಿ ಎರಡನೇ ಸುತ್ತಿನ ಮತದಾನ: ಜಾರ್ಖಂಡ್‌ ನಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 2019 ರಲ್ಲಿ ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರೆ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)-ಕಾಂಗ್ರೆಸ್ ಮೈತ್ರಿಕೂಟವು ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ.

ಜಾರ್ಖಂಡ್‌ ನಲ್ಲಿ 81 ವಿಧಾನಸಭಾ ಕ್ಷೇತ್ರಗಳಿದ್ದು, ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ನವೆಂಬರ್​​ 13 ರಂದು ಮತದಾನ ನಡೆದಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.