ಮೈಸೂರು: ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದು ಹಕ್ಕು ಕೂಡ. ಆ ಹಕ್ಕನ್ನು ಅರ್ಹರಾದ ಪ್ರತಿಯೊಬ್ಬರೂ ತಪ್ಪದೇ ಚಲಾಯಿಸಬೇಕು. ಆಗ ತಾನೇ ನಾವೂ ಧೈರ್ಯವಾಗಿ ಕೆಲಸ ಮಾಡಿಕೊಡುವಂತೆ ಕೇಳಬಹುದು? ಎಂದು ಖ್ಯಾತ ಗಾಯಕ ನವೀನ್ ಸಜ್ಜು ಹೇಳಿದ್ದಾರೆ.
ಮತದಾನ ಮಾಡಿದರೆ ಜನರ ಸೇವೆ ಮಾಡುವವರು ತಪ್ಪುಗಳನ್ನು ಮಾಡಿದರೆ ಪ್ರಶ್ನಿಸಲು ಸಾಧ್ಯವಾಗುತ್ತದೆ. ಚುನಾವಣೆಯಲ್ಲಿ ಒಳ್ಳೆಯವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಬಾರದು. ಪ್ರತಿ ಚುನಾವಣೆಯಲ್ಲೂ ನಾನು ಮತದಾನ ಮಾಡುತ್ತಾ ಬಂದಿದ್ದೇನೆ ಎಂದರು.
ಯುವಜನರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು. ನನ್ನದೊಂದು ಮತದಿಂದ ಏನಾಗಬಹುದು ಎಂಬ ಭಾವನೆ ಬರಬಾರದು. ಒಂದು ವೇಳೆ, ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರೂ ಇಷ್ಟವಾಗದಿದ್ದರೆ ನೋಟಾ ಚಲಾಯಿಸುವುದಕ್ಕೂ ಅವಕಾಶವಿದೆ. ಅದನ್ನೂ ಬಳಸಿಕೊಳ್ಳಬಹುದು. ಯಾವುದೇ ಚುನಾವಣೆಯಲ್ಲೂ ಹಕ್ಕು ಚಲಾಯಿಸುವುದರಿಂದ ದೂರ ಉಳಿಯಬಾರದು. ದೂರವಿದ್ದರೆ, ನಾಗರಿಕರಾಗಿ ನಮ್ಮ ಭಾಗವಹಿಸುವಿಕೆಯೇ ಇಲ್ಲದಂತಾಗುತ್ತದೆ. ಸಂವಿಧಾನ ಒದಗಿಸಿರುವ ಈ ಹಕ್ಕನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದೂ ಅವರು ಹೇಳಿದರು.