ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳನ್ನು ತಾಳೆ ಮಾಡಲು ನಿರ್ದೇಶನ ನೀಡುವಂತೆ ಕೋರಿದ್ದ ಮತ್ತೊಂದು ಅರ್ಜಿಯನ್ನೂ ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಪ್ರಸ್ತುತ, ಲೋಕಸಭೆ ಚುನಾವಣೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 5 ಇವಿಎಂಗಳನ್ನು ವಿವಿಪ್ಯಾಟ್‌ನೊಂದಿಗೆ ತಾಳೆ ಹಾಕಲಾಗುತ್ತದೆ.
ಸುಪ್ರೀಂ ಕೋರ್ಟ್‌ನ ಮತ್ತೊಂದು ವಿಭಾಗೀಯ ಪೀಠವು ಇತ್ತೀಚೆಗೆ ಅಂತಹ ಮನವಿಯನ್ನು ಈಗಾಗಲೇ ತಿರಸ್ಕರಿಸಿರುವುದರಿಂದ, ಈ ವಿಚಾರವಾಗಿ ಮತ್ತೊಂದು ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಸ್ಪಷ್ಟಪಡಿಸಿತು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಏಪ್ರಿಲ್ 26 ರಂದು (ಶುಕ್ರವಾರ) ಎಲ್ಲಾ ವಿವಿಪ್ಯಾಟ್ ಚೀಟಿಗಳನ್ನು ಇವಿಎಂಗಳ ಮೂಲಕ ಚಲಾವಣೆಯಾದ ಮತಗಳೊಂದಿಗೆ ತಾಳೆ ಮಾಡಿ ಇವಿಎಂ ಮತಗಳ ವಿಶ್ವಾಸಾರ್ಹತೆ ಹೆಚ್ಚಿಸಬೇಕು ಎಂದು ಕೋರಿದ್ದ ಮನವಿಯನ್ನು ವಜಾಗೊಳಿಸಿತ್ತು. ಇವಿಎಂಗಳ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ನಡೆಸುವ ಹಳೆಯ ವಿಧಾನಕ್ಕೆ (ಪೇಪರ್ ಬ್ಯಾಲಟ್) ಹಿಂತಿರುಗಲು ಕೋರಿದ್ದ ಅರ್ಜಿದಾರರ ಮನವಿಯನ್ನೂ ಅದು ತಿರಸ್ಕರಿಸಿತ್ತು.
ಚುನಾವಣಾ ಸಮಯದಲ್ಲಿ ಇವಿಎಂಗಳ ಮೂಲಕ ಚಲಾವಣೆಯಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ತಾಳೆ ಮಾಡಲು ನಿರ್ದೇಶನಗಳನ್ನು ಕೋರಿದ್ದ ಮೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಆ ತೀರ್ಪು ನೀಡಲಾಗಿತ್ತು.
ಪ್ರತಿ ಇವಿಎಂ ಮತವನ್ನು ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡುವಂತೆ ಒಬ್ಬ ಅರ್ಜಿದಾರರು ಕೋರಿದ್ದರೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಮತ್ತೊಂದು ಮನವಿಯಲ್ಲಿ ಮತದಾರರು ತಮ್ಮ ಮತವನ್ನು ತಾವು ದಾಖಲಿಸಿದಂತೆಯೇ ಎಣಿಕೆ ಮಾಡಲಾಗಿದೆ ಮತ್ತು ಮತಚಲಾಯಿಸಿದಂತೆಯೇ ದಾಖಲಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅನುವಾಗುವಂತೆ ವಿವಿಪ್ಯಾಟ್ ಚೀಟಿಗಳನ್ನು ಇವಿಎಂಗಳ ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು ಎಂದು ವಿನಂತಿಸಲಾಗಿತ್ತು.