ಮನೆ ಕಾನೂನು ಅಪಘಾತಕ್ಕೊಳಗಾದ ಚಾಲಕನ ವೇತನ ಶ್ರೇಣಿ ಕಡಿಮೆ ಮಾಡಲಾಗದು: ಹೈಕೋರ್ಟ್

ಅಪಘಾತಕ್ಕೊಳಗಾದ ಚಾಲಕನ ವೇತನ ಶ್ರೇಣಿ ಕಡಿಮೆ ಮಾಡಲಾಗದು: ಹೈಕೋರ್ಟ್

0

ಬೆಂಗಳೂರು: ರಸ್ತೆ ಅಪಘಾತಕ್ಕೆ ಒಳಗಾದ ಪರಿಣಾಮ ಚಾಲಕನ ವೇತನ ಶ್ರೇಣಿಯಿಂದ ಕಚೇರಿ ಸಹಾಯಕನ ವೇತನ ಶ್ರೇಣಿಗೆ ಹಿಂಬಡ್ತಿ ನೀಡಿರುವ ಬಿಎಂಟಿಸಿ ಕ್ರಮವನ್ನು ಹೈಕೋರ್ಟ್ ರದ್ದು ಪಡಿಸಿದೆ.

ಅಲ್ಲದೇ ಚಾಲಕನ ವೇತನ ಶ್ರೇಣಿಯ ಮೂಲಕ ವೇತನ ಪಾವತಿ ಮಾಡುವಂತೆ ಬಿಎಂಟಿಸಿಗೆ ಸೂಚನೆ ನೀಡಿದೆ.

ರಸ್ತೆ ಅಪಘಾತಕ್ಕೊಳಗಾಗಿ ಶೇ.40 ರಷ್ಟು ಅಂಗವೈಫಲ್ಯಕ್ಕೆ ತುತ್ತಾಗಿದ್ದ, ವೇತನ ಶ್ರೇಣಿಯಿಂದ ಹಿಂಬಡ್ತಿ ಪಡೆದಿದ್ದ ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಬಿ. ಜಯದೇವಯ್ಯ ಈ ಬಗ್ಗೆ ಹೈಕೋರ್ಟ್’​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ವಿಶೇಷಚೇತನರ ಸೆಕ್ಷನ್​ 47ರಂತೆ ಸರ್ಕಾರಿ ಉದ್ಯೋಗದಲ್ಲಿರುವ ಸಂದರ್ಭ ಅಂಗವೈಫಲ್ಯಕ್ಕೆ ತುತ್ತಾದಲ್ಲಿ ವೇತನ ಶ್ರೇಣಿ ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲದೇ, ಅಂತಹ ವ್ಯಕ್ತಿ ಆ ಹುದ್ದೆಗೆ ಅರ್ಹರಿಲ್ಲದಿದ್ದಲ್ಲಿ, ಬೇರೊಂದು ಉದ್ಯೋಗ ನೀಡಬಹುದಾಗಿದೆ. ಆದರೆ, ನಿವೃತ್ತಿಯಾಗುವವರೆಗೂ ಯಾವುದೇ ವೇತನ ಶ್ರೇಣಿಯನ್ನು ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರರಾದ ಎಂ.ಬಿ ಜಯದೇವಯ್ಯ ಅವರು 1984ರಲ್ಲಿ ಕೆಎಸ್’ಆರ್’​ಟಿಸಿ ಮತ್ತು ಬಿಟಿಸಿ ವಿಭಾಗಕ್ಕೆ ಚಾಲಕರಾಗಿ ನೇಮಕಗೊಂಡಿದ್ದರು. ಇದಾದ ಕೆಲ ವರ್ಷಗಳ ಬಳಿಕ ಬಿಟಿಸಿ ಬಿಎಂಟಿಸಿಯಾಗಿ ಬದಲಾಗಿತ್ತು.1999ರಲ್ಲಿ ರಸ್ತೆ ಅಪಘಾತ್ತಕ್ಕೀಡಾಗಿದ್ದ ಜಯದೇವಯ್ಯ, ಹಲವು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 11 ತಿಂಗಳ ನಂತರ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಅಪಘಾತದಿಂದಾಗಿ ಶೇ.40ರಷ್ಟು ಅಂಗ ವೈಫಲ್ಯಕ್ಕೆ ತುತ್ತಾದ್ದರಿಂದ ಬಸ್​ ಚಾಲಕನಾಗಿ ಮುಂದುವರೆಸುವುದಕ್ಕೆ ಅವಕಾಶವಿಲ್ಲ ಎಂದು ವೈದ್ಯಕೀಯ ವರದಿ ತಿಳಿಸಿತ್ತು. ಜೊತೆಗೆ, ಶಿಸ್ತು ಪ್ರಾಧಿಕಾರವು ಅಪಘಾತದಲ್ಲಿ ಚಾಲಕ ನಿರ್ಲಕ್ಷ್ಯ ವಹಿಸಿರಲಿಲ್ಲ ಎಂದು ಸಹ ತಿಳಿಸಿತ್ತು.

ಆದರೆ, ಬಿಎಂಟಿಸಿ ಅಧಿಕಾರಿಯು ಚಾಲಕನಾಗಿದ್ದ ಜಯದೇವಯ್ಯ ಅವರನ್ನು ಕಚೇರಿ ಸಹಾಯಕನ್ನಾಗಿ ನೇಮಿಸಿ, ವೇತನ ಶ್ರೇಣಿಯಲ್ಲಿ ಹಿಂಬಡ್ತಿ ನೀಡಿತ್ತು. ಇದನ್ನು ಪ್ರಶ್ನಿಸಿ ಜಯದೇವಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಚಾಲಕನ ವೇತನ ಶ್ರೇಣಿ ನೀಡುವಂತೆ ಸೂಚನೆ ನೀಡಿತ್ತು. ಆದರೂ ಬಿಎಂಟಿಸಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಜಯದೇವಯ್ಯ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು.

ಈ ನಡುವೆ ಜಯದೇವಯ್ಯ ಅವರನ್ನು ಮತ್ತೊಂದು ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. 2014ರಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಬಿಎಂಟಿಸಿಗೆ ಸಲ್ಲಿಸಿದ್ದರು. ಆದರೂ, ಬಿಎಂಟಿಸಿ ವೇತನ ಶ್ರೇಣಿಯನ್ನು ಬದಲಾಯಿಸಲು ಮುಂದಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಜಯದೇವಯ್ಯ ಮತ್ತೊಂದು ಬಾರಿ ಹೈಕೋರ್ಟ್’ನ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಚಾಲಕನ ವೇತನ ಶ್ರೇಣಿಯಂತೆ ವೇತನ ಪಾವತಿ ಮಾಡುವುದಕ್ಕೆ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.