ಬೆಂಗಳೂರು (Bengaluru)- ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸಲಾಗುತ್ತಿದೆ. ನಿಮಗೆ ಧರ್ಮ ಬೇಕಾ? ಜೀವನ ಬೇಕಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumarswamy) ಅವರು ಜನರನ್ನು ಪ್ರಶ್ನೆ ಮಾಡಿದ್ದಾರೆ.
ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ʼಜನತಾ ಜಲಧಾರೆʼ ಕಾರ್ಯಕ್ರಮದ ವೇಳೆ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಧರ್ಮವನ್ನು ಮನೆಯಲ್ಲಿ ಇಟ್ಟುಕೊಳ್ಳೋಣ. ಬೀದಿಯಲ್ಲಿ ರಕ್ತದ ಓಕುಳಿ ಹರಿಸುವುದು ಬೇಡ. ಈಗಾಗಲೇ ಎರಡು ಬಾರಿ ನಾನು ನಮ್ಮ ತಂದೆ-ತಾಯಿಗಳ ಪುಣ್ಯದಿಂದ ಮುಖ್ಯಮಂತ್ರಿ ಆಗಿದ್ದೇನೆ. ಮತ್ತೆ ಸಿಎಂ ಆಗಬೇಕು ಅನ್ನೋದು ಮುಖ್ಯ ಅಲ್ಲ. ಇಂದು ಬೆಳಗ್ಗೆ ಒಂದು ಚಾನಲ್ʼನಲ್ಲಿ ಶಾಲಾ ಮಕ್ಕಳು ಅನುಭವಿಸುತ್ತಿರುವ ಹಿಂಸೆಯನ್ನು ನೋಡಿದ್ದೇನೆ. ಮಹಾಲಕ್ಷ್ಮಿ ಲೇಔಟ್ʼನಲ್ಲಿ ಖಾಸಗಿ ಶಾಲೆಯ ಅವ್ಯವಸ್ಥೆಯನ್ನು ಆ ವಾಹಿನಿ ಹೊರಗಿಟ್ಟಿದೆ. ಹಲವಾರು ಶಾಲೆಗಳಲ್ಲಿ ಇಂತಾ ವ್ಯವಸ್ಥೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದ ಅವರು, ಇಂಥ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕೇ ಹೊರತು ಸಮಾಜವನ್ನು ಒಡೆಯಲು ಅಲ್ಲ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.
ಇಂಥ ಸಮಸ್ಯೆಗಳನ್ನು ಗಮನಿಸಿಯೇ ನಾನು ಪಂಚತಂತ್ರ ಕಾರ್ಯಕ್ರಮಗಳಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಯ ಬಗ್ಗೆ ಕಾರ್ಯಕ್ರಮ ರೂಪಿಸಿದ್ದೇನೆ. ಕೂಡಲೇ ಆ ಶಾಲೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು ಅವರು.
ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣಗೆ ಸವಾಲು:
ತಾಕತ್ತು ಇದ್ದರೆ ಸಚಿವ ಡಾ.ಅಶ್ವತ್ಥನಾರಾಯಣ ಅವರು ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ ಎಂದು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದರು. ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಅವರ ರೀತಿ ಲೂಟಿ ಹೊಡೆದಿಲ್ಲ. ಲೂಟಿ ಮಾಡ್ತಿರುವವರು ಅವರು. ಅವರಿಗೆ ತಾಕತ್ತು ಇದ್ದರೆ ನಾಳೆ ಬೆಳಿಗ್ಗೆಯೇ ನನ್ನ ವಿರುದ್ಧದ ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಸವಾಲು ಹಾಕಿದರು.
ಪ್ರಾಧ್ಯಾಪಕರ ನೇಮಕಾತಿಯಲ್ಲಿ 450 ಕೋಟಿ ಅಕ್ರಮ ಆಗಿದೆ. ನೀವು ನನ್ನ ಬಗ್ಗೆ ಮಾತನಾಡಿದರೆ ಹುಷಾರ್, ನನ್ನ ಬಳಿ ಇರುವ ದಾಖಲೆಗಳು ನಿಮ್ಮ ಬಳಿಯೂ ಇಲ್ಲ. ಮಾತನಾಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಿ” ಎಂದು ಸಚಿವರಿಗೆ ಮಾಜಿ ಮುಖ್ಯಮಂತ್ರಿಗಳು ಎಚ್ಚರಿಕೆ ಕೊಟ್ಟರು.