ಮನೆ ರಾಜಕೀಯ ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಬಸವನಗೌಡ ಪಾಟೀಲ ಯತ್ನಾಳ್

ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಬಸವನಗೌಡ ಪಾಟೀಲ ಯತ್ನಾಳ್

0

ಬೀದರ್:‌ ವಕ್ಫ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ನೇತೃತ್ವದ ತಂಡ‌ ಸೋಮವಾರ‌ (ನ.25) ತಾಲೂಕಿನ ಧರ್ಮಾಪುರ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ‌ ಅಹವಾಲು ಸ್ವೀಕಾರ ಮಾಡಿದರು.

Join Our Whatsapp Group

ಜಮೀನುಗಳಲ್ಲಿ ವಕ್ಫ್ ಹೆಸರು ಸೇರ್ಪಡೆ ಕುರಿತಂತೆ ತಂಡವು ಗ್ರಾಮದ ಹಲವು ಜನರಿಂದ ಮಾಹಿತಿ ಸಂಗ್ರಹ ಮಾಡಿತು. ಈ ವೇಳೆ ಪಹಣಿಯಿಂದ ವಕ್ಫ್ ಅಂತ ತೆಗೆಯುವುದಲ್ಲ, ವಕ್ಫ್ ಬೋರ್ಡನ್ನೇ ತೆಗೆಯಬೇಕು ಎಂದು ಆಗ್ರಹಿಸಿದರು. 2011ರಲ್ಲಿ ಪಹಣಿಯಲ್ಲಿ 11ನೇ ಕಾಲಂನಲ್ಲಿ ಖಾಲಿ ಇತ್ತು, ಬಳಿಕ ಮನೆಗಳನ್ನು ಕಟ್ಟಲಾಗಿದೆ ಎಂದು ನಮೂದಿಸಿತ್ತು. ಬಳಿಕ ಮನೆ ಎನ್ನುವುದನ್ನು ತೆಗೆದು, ವಕ್ಫ್ ಆಸ್ತಿ ಅಂತ ಸೇರಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದನ್ನು ಸೇರಿಸುವ ಕೆಲಸ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಲ್ಲೆಲ್ಲಿ ಮುಸ್ಲಿಂ ಜಿಲ್ಲಾಧಿಕಾರಿಗಳಿದ್ದರೋ ಅಲ್ಲಿ ವಕ್ಫ್ ಅಂತ ಮಾಡಿದ್ದಾರೆ. ಬೀದರ ಜಿಲ್ಲೆಯಲ್ಲಿ ಜಾಫರ್ ಎಂಬ ಅಧಿಕಾರಿ ಬಂದು ಇಡೀ ಊರನ್ನೇ ವಕ್ಫ್ ಎಂದು ಮಾಡಿದ್ದಾರೆ. ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಮಹರ್ಷಿ ವಾಲ್ಮೀಕಿ ಜಾಗ, ಮನೆಗಳು, ದೇವಸ್ಥಾನಗಳು, ಜೊತೆಗೆ ಆಳಂದದಲ್ಲಿ ಪೊಲೀಸ್ ಸ್ಟೇಷನ್, ಕ್ವಾಟ್ರಸ್ ಎಲ್ಲವೂ ವಕ್ಫ್ ಮಾಡಿದ್ದಾರೆ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ತಂಡ ಮಾಡಿದ್ದೇವೆ, ಜನಜಾಗೃತಿ ಮಾಡುತ್ತಿದ್ದೇವೆ. ವಕ್ಫ್ ಬರೀ ತಿದ್ದುಪಡಿ ಅಲ್ಲ, ಇಡೀ ವಕ್ಫ್ ಬೋರ್ಡನ್ನೇ ಭಾರತದಿಂದ ತೆಗೆದುಹಾಕಬೇಕು. ಒಂದೇ ಒಂದು ಮನೆಗೆ ಕೈ ಹಾಕಿದರೆ ಪರಿಣಾಮ ಸರಿ ಇರೋದಿಲ್ಲವೆಂದು ವಕ್ಫ್ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಹಾಗಾಗಿ ಅವರು ಸುಮ್ಮನಿದ್ದಾರೆ. ಅನೇಕ ಇಲಾಖೆಗಳಿಗೆ ಅಧಿಕಾರಿಗಳಿಲ್ಲ, ಆದರೆ ವಕ್ಫ್‌ನಲ್ಲಿರುವ ಅಧಿಕಾರಿಗಳು ಸರ್ಕಾರಿ ಜಾಗ ಸೇರಿ, ಕಂಡ ಜಾಗವನ್ನೆಲ್ಲಾ ಟ್ರಿಬ್ಯುನಲ್ ಮೂಲಕ ವಕ್ಫ್ ಆಸ್ತಿ ಎಂದು ಮಾಡಿಕೊಳ್ಳುತ್ತಿದ್ದಾರೆ. ಟ್ರಿಬ್ಯುನಲ್‌ನಲ್ಲಿ ಇರುವವರೆಲ್ಲಾ ಮುಸ್ಲಿಮರೇ ಆಗಿದ್ದು, ಅವರು ಇದರ ವಿರುದ್ಧ ತೀರ್ಪು ಕೊಡಲು ಸಾಧ್ಯವಾ ಅಂತ ಪ್ರಶ್ನಿಸಿದರು.

ಭಾರತೀಯ ಸೈನ್ಯದ್ದು 18ಲಕ್ಷ ಎಕರೆ ಜಾಗವಿದೆ, ರೈಲ್ವೇ ಇಲಾಖೆಯದ್ದು 15 ಲಕ್ಷ ಎಕರೆ, ಮೂರನೆಯದು ವಕ್ಫ್ ಪಾರ್ಲಿಮೆಂಟರಿ ಬೋರ್ಡ್ ಜಂಟಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಹೇಳಿದಂತೆ, ಭಾರತದಲ್ಲಿ 38 ಲಕ್ಷ ಎಕರೆ ಜಾಗವನ್ನ ವಕ್ಫ್ ಮಾಡಿಕೊಳ್ಳಲು ಹೊರಟಿದ್ದಾರೆ. ಈ ಮೂಲಕ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಅವರು 42ನೇ ಕಾನೂನಿಗೆ ತಿದ್ದುಪಡಿ ತರಲು ಹೊರಟಿದ್ದು, ಅದಕ್ಕೆ ನೀವೆಲ್ಲರೂ ಬೆಂಬಲ ನೀಡಬೇಕು. ನೀವ್ಯಾರು ಹೆದರುವ ಅವಶ್ಯಕತೆ ಇಲ್ಲ. ಎಲ್ಲೆಲ್ಲಿ ಕಾಂಗ್ರೆಸ್ ಎಂಪಿಗಳಿದ್ದಾರೆ, ಅವರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.