ಮನೆ ರಾಜ್ಯ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ತ್ಯಾಜ್ಯ ನಿರ್ವಹಣೆ ಅತ್ಯಗತ್ಯ: ಡಾ. ಮಧು ಎನ್ ಎನ್

ಸ್ವಚ್ಛ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ತ್ಯಾಜ್ಯ ನಿರ್ವಹಣೆ ಅತ್ಯಗತ್ಯ: ಡಾ. ಮಧು ಎನ್ ಎನ್

0

ಮೈಸೂರು: ಸ್ವಚ್ಛ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ಮನೆಯಿಂದಲೇ ಹಸಿ ಕಸ ಒಣ ಕಸ ಬೇರ್ಪಡಿಸಿ, ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುವುದು ಪರಿಸರ ಸಂರಕ್ಷಣೆಯಲ್ಲಿ ಬಹಳ ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಮಧು ಎನ್ ಎನ್ ಅವರು ತಿಳಿಸಿದರು.

Join Our Whatsapp Group

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಹಾಗೂ ಕರ್ನಾಟಕ ಯೂತ್ ನೆಟ್ವರ್ಕ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಚಿಕ್ಕ ಗಡಿಯಾರದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಕೆಲವು ಭಾಗಗಳಲ್ಲಿ ಪ್ಲಾಸ್ಟಿಕ್ ನ ಕಸದ ರಾಶಿಯನ್ನು ಕಾಣಬಹುದು, ಇದು ಕೊಳೆಯಲು ನೂರಾರು ವರ್ಷಗಳೇ ಬೇಕು. ಪರಿಸರಕ್ಕೆ ಹಾನಿಕರವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಅನ್ನು ವಿರೋಧಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ನಗರದ ಸ್ವಚ್ಛತೆ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯು ಸದಾ ಜೊತೆಗಿರುತ್ತದೆ ಎಂದರು.

ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕು. ಇಂದೆಂದು ದಾಖಲಾಗಿರದ ತಾಪಮಾನ ಮೈಸೂರಿನಲ್ಲಿ ಈ ಬಾರಿ ನಾವು ಕಂಡಿದ್ದೇವೆ. ಪರಿಸರದ ಮೇಲಿನ ಶೋಷಣೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸರದ  ಮತ್ತಷ್ಟು ವೈಪರಿತ್ಯಗಳನ್ನು ನಾವು ಎದುರಿಸಬೇಕಾಗುತ್ತದೆ. ಇವೆಲ್ಲವೂ ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಇಂದಿನಿಂದಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಯುವ ಜನರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಕುರಿತು ಪರಿಸರವಾದಿಗಳಾದ ಪ್ರೊ. ರವಿಕುಮಾರ್ ಅವರು ಮಾತನಾಡಿ, ತ್ಯಾಜ್ಯದ ಮೇಲಿರುವ ನಮ್ಮ ಮನಸ್ಥಿತಿ ಬದಲಾಗಬೇಕು. ಯಾವುದು ಕಸವಲ್ಲ, ಆದರೆ ಯಾವುದನ್ನು ಹೇಗೆ ಬಳಕೆ ಮಾಡಬೇಕು ಎಂಬುದು ನಮಗೆ ತಿಳಿದಿರಬೇಕು.  ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಯುವ ಮನಸ್ಸುಗಳು ಮಿಡಿಯುತ್ತಿರುವುದು ಸಂತೋಷದ ವಿಷಯ ಆದರೆ ಇಂದಿನ ಪರಿಸರದ ಸ್ಥಿತಿಗತಿಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಬಹಳ ಭೀಕರವಾದ ದಿನಗಳನ್ನು ಎದುರಿಸುವ ಆತಂಕ ಎದುರಾಗುತ್ತದೆ. ಪರಿಸರ ಸಂರಕ್ಷಣೆ ನಮಗೆ ಸಿಗುವ ಅವಕಾಶವಲ್ಲ ಅದು ನಮ್ಮ ಆದ್ಯತೆಯಾಗಿರಬೇಕು ಎಂದರು.

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕರಾದ ಸರಸ್ವತಿ ಅವರು ಮಾತನಾಡಿ ರಾಜ್ಯದಾದ್ಯಂತ ವಾಯ್ಸ್ ಫಾರ್ ಗ್ರೀನ್ ಅರ್ಥ್ ಎಂಬ 45 ದಿನಗಳ ಅಭಿಯಾನವನ್ನು ಕರ್ನಾಟಕ ಯುವ ಸಂಘಟನೆಯು ಆಯೋಜಿಸಿದ್ದು, ಇದರ ಅಂಗವಾಗಿ ರಾಜ್ಯದಾದ್ಯಂತ ಸಾವಿರ ಗಿಡಗಳನ್ನು ನೀಡಲಾಗಿದೆ. ಈ ಅಭಿಯಾನವು ಏಪ್ರಿಲ್ 22 ವಿಶ್ವಭೂಮಿ ದಿನಾಚರಣೆ ಎಂದು ಆರಂಭಗೊಂಡು ಇಂದಿಗೆ ಮುಕ್ತಾಯಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆಯಲ್ಲಿ ಕರ್ನಾಟಕ ಯೂತ್ ನೆಟ್ವರ್ಕ್ ನ ಸದಸ್ಯರಾದ ಕು. ಸ್ಮಿತಾ ಅವರು ಸ್ವಚ್ಛ ಮೈಸೂರಿಗಾಗಿ ಯುವ ಗುಂಪಿನ ಅವಾಲುಗಳನ್ನು ಆಯುಕ್ತರಿಗೆ ನೀಡಿದರು.

ಮನವಿ ಪತ್ರವು ನಗರದಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಕುರಿತು, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇರಿಸುವುದು, ಹೆಚ್ಚು ಗಿಡಮರಗಳನ್ನು ಬೆಳೆಸಲು ಅವಕಾಶಗಳನ್ನು ಕಲ್ಪಿಸುವ ಕುರಿತು, ಮಾಲಿನ್ಯವನ್ನು ನಿಯಂತ್ರಿಸಲು ಕಾನೂನುಗಳನ್ನು ಬಲಪಡಿಸುವ ಕುರಿತು, ಪರಿಸರ ಸಂರಕ್ಷಣೆಯಲ್ಲಿ ಯುವಜನರನ್ನು ಒಳಗೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು, ಸಾರ್ವಜನಿಕ ಸ್ಥಳಗಳು ಹಾಗೂ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ, ನಾಗರಿಕ ಸೇವಾ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನ ರೂಪಿಸುವುದು, ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಳಸಿದಂತೆ ದಂಡವನ್ನು ವಿಧಿಸುವುದು ಮತ್ತು ಕಾನೂನನ್ನು ಬಲಪಡಿಸುವುದನ್ನು ಸೇರಿದಂತೆ ಇತರ ಕ್ರಮಗಳನ್ನು ಒಳಗೊಂಡಿದೆ.

ನಗರದ ಚಿಕ್ಕ ಗಡಿಯಾರದ ಆವರಣದಿಂದ ಜಾಗೃತಿ ಜಾಥಾ ಆರಂಭಗೊಂಡು, ಸಂತೆಪೇಟೆ ಮೂಲಕ ಸಾಗಿ ಮೈಸೂರು ಮಹಾನಗರ ಪಾಲಿಕೆಯ ಬಳಿ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ರಾಜ್ಯ ಸಂಯೋಜಕರಾದ ಕು. ಶಾಲಿನಿ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.