ಮನೆ ರಾಜ್ಯ ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ನೀಡಿದ್ದ ನೀರಿನ ಬಿಲ್ ನೋಟಿಸ್ ವಾಪಸ್​​: ಸಚಿವ ಎಂ.ಬಿ.ಪಾಟೀಲ್

ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ನೀಡಿದ್ದ ನೀರಿನ ಬಿಲ್ ನೋಟಿಸ್ ವಾಪಸ್​​: ಸಚಿವ ಎಂ.ಬಿ.ಪಾಟೀಲ್

0

ಬೆಳಗಾವಿ: ತುಮಕೂರು ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೀಡಿದ ನೋಟೀಸ್ ​ಅನ್ನು ವಾಪಸ್​ ಪಡೆಯಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.

Join Our Whatsapp Group

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ”ಸಿದ್ದಗಂಗಾ ಮಠದ ಬಳಿ ಕೆಐಎಡಿಬಿಗೆ ಸೇರಿದ ಕೆರೆ ಇದೆ. ಆ ಕೆರೆಯಿಂದ‌ ನೀರನ್ನು ಮಠದವರು ತೆಗೆದುಕೊಂಡಿದ್ದರು. ಅದಕ್ಕೆ ಬಿಲ್ ಕೊಡುವಂತೆ ನೋಟಿಸ್ ನೀಡಲಾಗಿತ್ತು. ಸಿದ್ದಗಂಗಾ ಮಠವು ವಿಶ್ವಕ್ಕೆ ಮಾದರಿಯಾದ ಮಠ. ಹತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಬಸವಣ್ಣರ ತತ್ವದ ಅಡಿ ದಾಸೋಹ ಮಾಡುತ್ತಿರುವ ಮಠ ಅದಾಗಿದೆ. ಮಠವು ನೀರು ಪಡೆದುಕೊಂಡರೂ ತಪ್ಪಲ್ಲ.‌ ಇಲಾಖೆಯ ಮುಖ್ಯ ಅಭಿಯಂತರರು ಮಠದ ಜೊತೆ ಮಾತನಾಡಿದ್ದಾರೆ” ಎಂದರು.‌

”ನೀರಿನ ಬಿಲ್ ಅನ್ನು ಮನ್ನಾ ಮಾಡುತ್ತೇವೆ. ಅವರು ಬಳಸಿದ್ದರೂ ತಪ್ಪಲ್ಲ. ಸ್ವಾಮೀಜಿ ಜೊತೆ ಮಾತನಾಡುತ್ತೇನೆ.‌ ನೀರು ಬಳಸಿಲ್ಲ ಎಂದರೆ ಆಯ್ತು, ಬಳಸಿದ್ದರೂ ತಪ್ಪಲ್ಲ. ಮಠದವರು ಸ್ವಂತಕ್ಕೆ ನೀರನ್ನು ಬಳಸಲ್ಲ. ಅವರು ಇನ್ಮುಂದೆ ಬಳಸಿದರೂ ತಪ್ಪಿಲ್ಲ. 10 ಸಾವಿರ ಮಕ್ಕಳಿಗೆ ಅನ್ನ, ಶಿಕ್ಷಣ ಕೊಡುತ್ತಾರೆ.‌ ಒಂದು ವೇಳೆ ನೀರು ಬಳಸದೇ ಇದ್ದರೂ ನೋಟಿಸ್ ಕೊಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗದುಕೊಳ್ಳುತ್ತೇನೆ” ಎಂದು ಸಚಿವರು ತಿಳಿಸಿದರು.

ಏನಿದು ನೋಟಿಸ್ ವಿವಾದ: ತುಮಕೂರು ತಾಲೂಕಿನ ಹೊನ್ನೆನಹಳ್ಳಿ ಕರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಸರಬರಾಜಿನ ವಿದ್ಯುತ್ ಬಿಲ್​ ಅನ್ನು ಪಾವತಿ ಮಾಡುವಂತೆ ಕೆಐಎಡಿಬಿ ಏಪ್ರಿಲ್​ನಲ್ಲಿ ಸಿದ್ದಗಂಗಾ ಮಠಕ್ಕೆ ನೋಟಿಸ್ ಕಳುಹಿಸಿತ್ತು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ತುಮಕೂರು ತಾಲೂಕು, ಹೊನ್ನನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಯವರೆಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ಪ್ರಸಕ್ತ 2023-24ನೇ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗಿದೆ‌. ಈ ಕರೆಯಿಂದ ನೀರನ್ನು ಸಿದ್ದಗಂಗಾ ಮಠದ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ.

ಈ ಸಂಬಂಧ 70.31 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ.‌ ವಿದ್ಯುತ್ ಬಿಲ್ ಗಳನ್ವಯ ಹಣವನ್ನು ಬೆಸ್ಕಾಂಗೆ ಪಾವತಿಸಲು ಅನುಮೋದನೆ ಕೋರಿ ಕೆಐಎಡಿಬಿಗೆ 25.03.2024ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ವತಿಯಿಂದ ನೀರು ಸರಬರಾಜು ಮಾಡಲಾಗಿದ್ದು, ನೀರನ್ನು ಸಿದ್ಧಗಂಗಾ ಮಠಕ್ಕೆ ದೈನಂದಿನ ಚಟುವಟಿಕೆಗಳಿಗೆ ಉಪಯೋಗಿಸಲಾಗಿದೆ. ಪ್ರಸ್ತುತ ಮಂಡಳಿಯ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ನೀರು ಸರಬರಾಜಿನ ವಿದ್ಯುತ್‌ ಬಳಕೆಯ ವೆಚ್ಚವನ್ನು ಶ್ರೀಸಿದ್ದಗಂಗಾ ಮಠದ ವತಿಯಿಂದ ಭರಿಸುವಂತೆ ನೋಟಿಸ್ ನೀಡಲಾಗಿತ್ತು.